ವಿಜಯಪುರ(ಹುಬ್ಬಳ್ಳಿ): ಸುಪ್ರೀಂಕೋರ್ಟ್ ನಲ್ಲಿನ ಹಿಜಾಬ್ ಪ್ರಕರಣದ ವಿಚಾರಣೆಯನ್ನು ಸಂವಿಧಾನ ಪೀಠಕ್ಕೆ ವರ್ಗಾಯಿಸಿದ್ದು, ಅಲ್ಲಿ ಬರುವ ತೀರ್ಮಾನಕ್ಕೆ ಬದ್ಧವಿರುವುದಾಗಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು. ವಿಜಯಪುರದಲ್ಲಿ ಮಾತನಾಡಿದ ಅವರು, ಹಿಜಾಬ್ ಪ್ರಕರಣವನ್ನು ಇಡೀ ಪ್ರಪಂಚವೇ ಗಮನಿಸುತ್ತಿದೆ. ಇಡೀ ದೇಶದ ಜನ ಯಾವುದು ಸರಿ ಯಾವುದು ತಪ್ಪು ಎನ್ನುವ ಚರ್ಚೆಯಲ್ಲಿ ತೊಡಗಿದ್ದಾರೆ ಎಂದು ಹೇಳಿದರು.
ಹಿಜಾಬ್ ಪ್ರಕರಣದ ತೀರ್ಪಿಗೆ ಬದ್ಧ : ಇಸ್ಲಾಂ ಧರ್ಮದಲ್ಲಿ ಹಿಜಾಬ್ ಕಡ್ಡಾಯ ಇಲ್ಲ, ಕುರಾನ್ನಲ್ಲೂ ಇದು ಎಲ್ಲಿಯೂ ಇದರ ಉಲ್ಲೇಖಿಸಿಲ್ಲ, ಹೀಗಾಗಿ ಹೈಕೋರ್ಟ್ ತೀರ್ಪು ನೀಡಿದಾಗಲೇ ಮುಸ್ಲಿಂ ಮುಖಂಡರು ಆ ಆರು ಹೆಣ್ಣು ಮಕ್ಕಳಿಗೆ ಬೈದು ಬುದ್ದಿ ಹೇಳಿದ್ದರೆ ಇಂದು ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸದ್ಯ ದ್ವಿಸದಸ್ಯ ಪೀಠ ವಿಭಿನ್ನ ಅಭಿಪ್ರಾಯ ನೀಡಿದ್ದು ಅದನ್ನು ಪ್ರಶ್ನೆ ಮಾಡುವ ಹಕ್ಕು ಯಾರಿಗೂ ಇಲ್ಲ. ಸಮಾನತೆಗೆ, ಸಂವಿಧಾನಕ್ಕೆ ಆದ್ಯತೆ ಕೊಡಬೇಕು, ಐದು ಅಥವಾ ಏಳು ಜನರ ನ್ಯಾಯಾಧೀಶರ ತೀರ್ಪು ಏನಾಗಲಿದೆ ಎಂಬುದು ನೋಡಬೇಕು ಎಂದರು.
ಆರು ಜನ ಹೆಣ್ಣು ಮಕ್ಕಳನ್ನು ಎಬ್ಬಿಸಿದ ರಾಷ್ಟ್ರ ದ್ರೋಹಿಗಳು ಯಾರು? ಮುಸ್ಲಿಂ ದಂಗೆಗೆ ಕಾರಣ ಯಾರು? ಎಂಬ ಚರ್ಚೆ ಶುರುವಾಗಿ ಹಿಂದೂ ಮಕ್ಕಳು ಸಹ ಹೋರಾಟಕ್ಕೆ ಮುಂದಾದರು. ಆಗಲೇ ಮಕ್ಕಳಿಗೆ ಬುದ್ದಿ ಹೇಳಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ, ಬೆಂಕಿ ಹಚ್ಚುವ ಕೆಲಸ ಆಗಿದ್ದರಿಂದ ಪರಿಸ್ಥಿತಿ ಇಲ್ಲಿಗೆ ಬಂದಿದೆ ಎಂದು ಅಭಿಪ್ರಾಯಪಟ್ಟರು.
ಹಿಜಾಬ್ ಸಂಬಂಧ ಕೂಡಲೇ ಸೂಕ್ತ ಆದೇಶದ ಅವಶ್ಯಕತೆ ಇದೆ : ಶೆಟ್ಟರ್ -ಹಿಜಾಬ್ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ ದ್ವಿಸದಸ್ಯ ಪೀಠದ ಒಬ್ಬರು ನ್ಯಾಯಾಧೀಶರು ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದಿದ್ದರೇ ಮತ್ತೊಬ್ಬರು ಹೈಕೋರ್ಟ್ ಆದೇಶವನ್ನು ತಿರಸ್ಕಾರ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಸಾಂವಿಧಾನ ಪೀಠ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ತೀರ್ಪು ಹೊರ ಬರಬೇಕಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.
ಹಿಜಾಬ್ ಕುರಿತು ಸುಪ್ರೀಂ ಕೋರ್ಟ್ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ದ್ವಿ ಸದಸ್ಯ ಪೀಠ ಈಗ ಪ್ರಕರಣವನ್ನು ಸಿಜೆಐಗೆ ವರ್ಗಾವಣೆ ಮಾಡಿದ್ದು, ಈ ಬಗ್ಗೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಸಾಂವಿಧಾನ ಪೀಠ ನ್ಯಾಯಾಲಯದ ಮೂಲಕ ಹಿಜಾಬ್ ಪ್ರಕರಣವನ್ನು ಶೀಘ್ರವೇ ಇತ್ಯರ್ಥ ಮಾಡಬೇಕಾಗಿದೆ ಎಂದು ಹೇಳಿದರು.