ವಿಜಯಪುರ:ಹುಲಿ ಉಗುರಿನಂತಿರುವ ಪೆಂಡೆಂಟ್ ಧರಿಸಿದ ತಮ್ಮ ಪುತ್ರ ಶಾಶ್ವತ್ ಪಾಟೀಲರ ಫೋಟೋ ತೀರಾ ಹಳೆಯದ್ದು. ಕಿಡಿಗೇಡಿಗಳು ಈಗ ಫೇಸ್ಬುಕ್ನಲ್ಲಿ ಹರಿಬಿಟ್ಟಿದ್ದಾರೆ ಎಂದು ಬಿಜೆಪಿ ಮುಖಂಡ ಹಾಗೂ ನಿಗಮ ಮಂಡಳಿ ಮಾಜಿ ಅಧ್ಯಕ್ಷ ವಿಜುಗೌಡ ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ. ಹುಲಿ ಉಗುರಿನ ಮಾದರಿಯ ಪೆಂಡೆಂಟ್ ಧರಿಸಿದ ತಮ್ಮ ಮಗನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಈ ಬಗ್ಗೆ ನಗರದಲ್ಲಿಂದು ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿರುವ ಈ ಫೋಟೋ ಏಳೆಂಟು ವರ್ಷಗಳಷ್ಟು ಹಿಂದಿನದ್ದು. 2016-17ರಲ್ಲಿ ತೆಗೆದ ಫೋಟೋ. ಇದಕ್ಕೂ ಮೇಲಾಗಿ ವಾಸ್ತು ಪ್ರಕಾರ ಹಾಕಿಕೊಳ್ಳಲಾಗಿದ್ದ ನಕಲಿ ಹುಲಿ ಉಗುರಿನ ಪೆಂಡೆಂಟ್ ಆಗಿದೆ. ಅಸಲಿ ಉಗುರಿನ ಪೆಂಡೆಂಟ್ ಅಲ್ಲ. ಅಲ್ಲದೇ ಆ ಸರವನ್ನು ಆವಾಗಲೇ ತೆಗೆಯಲಾಗಿದೆ. ಈ ಫೋಟೋಗಳ ವೈರಲ್ ಕುರಿತಾಗಿ ಮತ್ತು ಹುಲಿ ಉಗುರಿನ ಪೆಂಡೆಂಟ್ ಸತ್ಯಾಸತ್ಯತೆ ಕುರಿತಾಗಿ ಅಧಿಕಾರಿಗಳು ತನಿಖೆ ನಡೆಸಲಿ ಎಂದರು.
ಇಂತಹ ಫೋಟೋವನ್ನು ಫೇಸ್ಬುಕ್ ಮತ್ತು ಮಾಧ್ಯಮದಲ್ಲಿ ಹರಿಬಿಟ್ಟು ಯಾರೋ ಕಿಡಿಗೇಡಿಗಳು ಸೇಡಿನ ರಾಜಕಾರಣ ಮಾಡುತ್ತಿದ್ದಾರೆ. ಇದು ತಮ್ಮ ಕುಟುಂಬದ ವಿರುದ್ಧ ರಾಜಕೀಯ ವಿರೋಧಿಗಳು ಮಾಡುತ್ತಿರುವ ಷಡ್ಯಂತ್ರ. ಈ ಮೊದಲೂ ಕೂಡಾ ನನ್ನ ಸಣ್ಣ ಮಗನ ಮೇಲೆ ಇಂತಹ ಕೆಲಸವಾಗಿತ್ತು. ಇದೀಗ ದೊಡ್ಡ ಮನಗ ಮೇಲೆ ಆಗುತ್ತಿದೆ. ಪ್ರಬುದ್ಧ ರಾಜಕಾರಣಿಗಳಾದವರು ಇಂತಹ ಕೀಳು ಮಟ್ಟಕ್ಕೆ ಇಳಿಯಬಾರದು. ಚಿಲ್ಲರೆ ರಾಜಕಾರಣದಿಂದ ಹೊರಬಬೇಕು ಎಂದು ವಿಜುಗೌಡ ಪಾಟೀಲ್ ತಮ್ಮ ವಿರೋಧಿಗಳ ವಿರುದ್ಧ ಕಿಡಿಕಾರಿದರು.