ಮುದ್ದೇಬಿಹಾಳ: ಹುಟ್ಟುಹಬ್ಬವನ್ನುಬಹುತೇಕ ಜನರು ಕೇಕ್ ಕತ್ತರಿಸಿ, ಪಾರ್ಟಿ ಮಾಡುವ ಮೂಲಕ ಆಚರಿಸಿಕೊಳ್ಳುವುದು ಸಾಮಾನ್ಯ. ಆದರೆ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ, ಬಿಜೆಪಿ ಮುಖಂಡ ಪ್ರಭುಗೌಡ ದೇಸಾಯಿ ತಮ್ಮ ಹುಟ್ಟುಹಬ್ಬವನ್ನು ಕೊರೊನಾ ವಾರಿಯರ್ಸ್ ಜೊತೆ ಆಚರಿಸಿಕೊಂಡಿದ್ದಾರೆ.
ದಿನಸಿ ಕಿಟ್ ವಿತರಿಸಿ ಹುಟ್ಟುಹಬ್ಬ ಆಚರಿಸಿಕೊಂಡ ಬಿಜೆಪಿ ಮುಖಂಡ ಕ್ಷೇತ್ರದ ತಾಳಿಕೋಟಿ ಪಟ್ಟಣದ ಪುರಸಭೆಯ ಪೌರಕಾರ್ಮಿಕರು, ಆರೋಗ್ಯ ಇಲಾಖೆಯ ಆರೋಗ್ಯ ನಿರೀಕ್ಷಕರು, ಆಶಾ ಕಾರ್ಯಕರ್ತೆಯರಿಗೆ ಒಂದು ತಿಂಗಳಿಗಾಗುವಷ್ಟು ದಿನಸಿ ಕಿಟ್ ವಿತರಿಸುವ ಮೂಲಕ ವಿಭಿನ್ನವಾಗಿ ತಮ್ಮಹುಟ್ಟುಹಬ್ಬ ಆಚರಿಸಿಕೊಂಡರು.
ಈ ಕಾರ್ಯಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ್ (ಕೂಚಬಾಳ) ಸಾಥ್ ನೀಡಿದ್ದು, ಅವರೇ ಮುಂಚೂಣಿಯಲ್ಲಿ ನಿಂತು ಕಿಟ್‌ಗಳನ್ನು ವಾರಿಯರ್ಸ್ಗೆ ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಎಸ್.ಪಾಟೀಲ್ (ಕೂಚಬಾಳ), ಸ್ನೇಹಿತ ಪ್ರಭು ದೇಸಾಯಿ ಅವರ ಜನ್ಮದಿನದ ಅಂಗವಾಗಿ ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ಆರೋಗ್ಯ ಇಲಾಖೆ ಸಿಬ್ಬಂದಿಗೆ ಹಾಗೂ ಆಶಾ ಕಾರ್ಯಕರ್ತೆಯರಿಗೆ ದಿನಸಿ ಕಿಟ್ ವಿತರಣೆ ಮಾಡಿದ್ದೇವೆ. ಇದಕ್ಕೆ ಖಾಸ್ಗತೇಶ್ವರ ಮಠದ ಸಿದ್ಧಲಿಂಗದೇವರು ಪ್ರೇರಣೆ ಎಂದರು.
5 ಕೆಜಿ ಬೆಲ್ಲ, 2 ಕೆಜಿ ಸಕ್ಕರೆ, ಚಹಾಪುಡಿ, ಮಸಾಲೆ ಪ್ಯಾಕೇಟ್, ಗೋಧಿ ಹಿಟ್ಟು, ಮೂರು ತರಹದ ರವೆ, ಅವಲಕ್ಕಿ, ಒಂದು ಚೀಲ ಚುರುಮುರಿ, ಶೇಂಗಾ, ಪುಟಾಣಿ, ತೊಗರಿ ಬೇಳೆ, ಹೆಸರು ಕಾಳು, ಕಡಲೆ ಬೇಳೆ, ಅರಿಷಿನ ಪುಡಿ, ಜೀರಿಗೆ, ಸಾಸಿವೆ, ಸಾಬೂನು, ಬಾಂಡೆ ಸಾಬೂನು, ಕೊಬ್ಬರಿ ಎಣ್ಣೆ, ಉಪ್ಪಿನಕಾಯಿ, ಒಳ್ಳೆಣ್ಣೆ, ಮ್ಯಾಗಿ ನೂಡಲ್ಸ್, ಬಿಸ್ಕೇಟ್, ಟೂಥ್ ಪೇಸ್ಟ್, ಹೋಂ ಕ್ಲೀನರ್ನ್ನು ದಿನಸಿ ಕಿಟ್ ಒಳಗೊಂಡಿದೆ.
ಕಿಟ್ ಬಗ್ಗೆ ಮಾತನಾಡಿರುವ ಪೌರಕಾರ್ಮಿಕರು ಹಾಗೂ ನರ್ಸ್ಗಳು, ನಮ್ಮ ಸೇವೆ ಗುರುತಿಸಿ ಈ ಹಿಂದೆ ಯಾರೂ ಕೊಡದೆ ಇರುವಷ್ಟು ಸಾಮಗ್ರಿಯನ್ನು ಕೊಟ್ಟಿರುವ ಪ್ರಭುಗೌಡ ದೇಸಾಯಿ ಹಾಗೂ ಆರ್.ಎಸ್.ಪಾಟೀಲ ಕೂಚಬಾಳ ಅಭಿಮಾನಿ ಬಳಗಕ್ಕೆ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ಹೇಳಿದರು.