ವಿಜಯಪುರ:ವಿಧಾನಸೌಧದಿಂದ ತಳಹಂತದವರೆಗೂ ಬೆಟ್ಟಿಂಗ್, ಮಟ್ಕಾ ಕಬಂಧಬಾಹುಗಳು ಚಾಚಿಕೊಂಡಿವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಆರೋಪಿಸಿದರು.
ಸಿಂದಗಿ ತಾಲೂಕಿನ ಯಂಕಂಚಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಜಯಪುರ ಜಿಲ್ಲೆಯೂ ಸೇರಿದಂತೆ ರಾಜ್ಯದ ಅನೇಕ ಕಡೆ ಮಟ್ಕಾ, ಬೆಟ್ಟಿಂಗ್ ದಂಧೆಗಳು ಹೆಚ್ಚಾಗಿ ನಡೆಯುತ್ತಿವೆ. ಇದರಿಂದ ಅನೇಕ ಬಡ ಕುಟುಂಬಗಳು ಬೀದಿ ಪಾಲಾಗಿವೆ. ಆದರೂ ರಾಜ್ಯದ ಬಿಜೆಪಿ ಸರ್ಕಾರ ಚಕಾರ ಎತ್ತದೆ ಮೌನವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಈ ದಂಧೆ ಮಿತಿಮೀರಿ ನಡೆಯುತ್ತಿದೆ. ಹಣ ಕೊಟ್ಟು ಜಿಲ್ಲೆಗೆ ಪೋಸ್ಟಿಂಗ್ ಮಾಡಿಸಿಕೊಂಡು ಬಂದಿರುವ ಅಧಿಕಾರಿಗಳಿಗೆ 'ಮಂತ್ಲಿ' ತಪ್ಪದೆ ಹೋಗುತ್ತಿದೆ. ದೊಡ್ಡದೊಂದು ಗ್ಯಾಂಗ್ ಜಿಲ್ಲೆಯಲ್ಲಿ ಈ ದಂಧೆಗಳನ್ನು ವ್ಯಾಪಕ ಮಟ್ಟದಲ್ಲಿ ಆಪರೇಟ್ ಮಾಡುತ್ತಿದೆ. ಜನರೇ ಬೀದಿ ಬೀದಿಗಳಲ್ಲಿ ನಿಂತು ಮಾತನಾಡುತ್ತಾ ಈ ಪೀಡೆಯನ್ನು ಹತ್ತಿಕ್ಕದ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನನ್ನ ಆಡಳಿತದಲ್ಲಿ ನಿಷೇಧಗೊಂಡಿತ್ತು:
2006ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ ಎಲ್ಲಾ ಲಾಟರಿಗಳನ್ನು ನಿಷೇಧ ಮಾಡಿದ್ದೆ. ಇಂಥ ದಂಧೆಗಳಿಗೆ ಕಠಿಣವಾಗಿ ಕಡಿವಾಣ ಹಾಕಿದ್ದೆ. ಆದರೆ ಈಗ ಅವೆಲ್ಲ ಬೇರೆ ಬೇರೆ ರೂಪಗಳಲ್ಲಿ ಅನಧಿಕೃತವಾಗಿ ಮತ್ತೆ ಕಾಣಿಸಿಕೊಂಡಿದೆ. ಇವುಗಳಿಗೆ ಪೊಲೀಸ್ ಇಲಾಖೆ ಕುಮ್ಮಕ್ಕು ನೀಡುತ್ತಿದೆ. ದೊಡ್ಡ ಹಂತದಲ್ಲಿರುವವರು ಇದರಲ್ಲಿ ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.
ಸಮಾಜದ ಆರೋಗ್ಯವನ್ನು ಹಾಳು ಮಾಡುತ್ತಿರುವ, ಯುವಕರ ಭವಿಷ್ಯಕ್ಕೆ ಕೊಳ್ಳಿ ಇಡುತ್ತಿರುವ ಈ ದಂಧೆಗಳು ದುರಾಡಳಿತದಿಂದ ನಡೆಯುತ್ತಿವೆ. ಶ್ರಮಜೀವಿಗಳ ಹಣ ಹಾಳಾಗುತ್ತಿದೆ. ಸರ್ಕಾರ ಅವುಗಳನ್ನು ಹತ್ತಿಕ್ಕುವ ಬದಲು ಸುಮ್ಮನಿದೆ ಎಂದು ಟೀಕಿಸಿದರು.