ವಿಜಯಪುರ :ಸಿಂದಗಿ ಉಪಚುನಾವಣೆಯ ಜಿದ್ದಾಜಿದ್ದಿನ ಕಣದಲ್ಲಿ ಕೊನೆಗೂ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಗೆಲುವಿನ ನಗೆ ಬೀರಿದ್ದಾರೆ. ಈ ಗೆಲುವಿಗಾಗಿ ಬಿಜೆಪಿ ಸರ್ಕಾರ ಟೊಂಕ ಕಟ್ಟಿ ನಿಂತಿದ್ದು ಮಾತ್ರ ಸುಳ್ಳಲ್ಲ.
ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಸಚಿವರಾದ ಗೋವಿಂದ ಕಾರಜೋಳ, ವಿ.ಸೋಮಣ್ಣ, ಶಶಿಕಲಾ ಜೊಲ್ಲೆ, ಸಿ.ಸಿ.ಪಾಟೀಲ್ ಸೇರಿದಂತೆ ಹಲವು ಮುಖಂಡರು ಕ್ಷೇತ್ರದಲ್ಲಿಯೇ ಮೊಕ್ಕಾಂ ಹೂಡಿದ್ದರು.
ಇದರ ಪರಿಣಾಮವಾಗಿ ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರ ದಾಖಲೆಯ 31,185 ಮತಗಳ ಅಂತರದಿಂದ ಜಯಗಳಿಸಲು ಸಾಧ್ಯವಾಯಿತು. ಕಳೆದ 2018ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ದಿ.ಎಂ.ಸಿ.ಮನಗೂಳಿ ವಿರುದ್ಧ 9 ಸಾವಿರಕ್ಕಿಂತ ಅಧಿಕ ಮತಗಳಿಂದ ಸೋಲು ಅನುಭವಿಸಿದ್ದರು.
ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಲು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪ್ರಮುಖ ನಾಯಕರು ಚುನಾವಣೆ ಪ್ರಚಾರ ನಡೆಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ಪರ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಅನೇಕರು ಪ್ರಚಾರ ನಡೆಸಿದ್ದರು.
ಜೆಡಿಎಸ್ ಅಭ್ಯರ್ಥಿ ಪರವಾಗಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಸುಮಾರು 10 ದಿನ ಕ್ಷೇತ್ರದಲ್ಲಿ ಉಳಿದು ಪ್ರಚಾರ ನಡೆಸಿದ್ದರು. ಮಾಜಿ ಸಿಎಂ ಕುಮಾರಸ್ವಾಮಿ ಸಹ ಹಾನಗಲ್‌ಗಿಂತ ಹೆಚ್ಚು ಪ್ರಚಾರ ಸಿಂದಗಿ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದರು. ಇನ್ನು ಆಡಳಿತಾರೂಢ ಬಿಜೆಪಿ ಸಿಂದಗಿ ಕ್ಷೇತ್ರದ 7 ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ಒಬ್ಬ ಸಚಿವರನ್ನು ನೇಮಿಸಿ ಗೆಲುವಿಗಾಗಿ ರಣತಂತ್ರ ರೂಪಿಸಿದ್ದರು.