ವಿಜಯಪುರ: ಸಾರ್ವಜನಿಕ ವಲಯಗಳ ಖಾಸಗೀಕರಣವನ್ನು ಕೇಂದ್ರ ಸರ್ಕಾರ ಕೈಬಿಡುವಂತೆ ಒತ್ತಾಯಿಸಿ ಭೀಮ ಆರ್ಮಿ ಕಾರ್ಯಕರ್ತರು ಇಂದು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಖಾಸಗೀಕರಣ ಕೈಬಿಡುವಂತೆ ಭೀಮ ಆರ್ಮಿ ಕಾರ್ಯಕರ್ತರ ಪ್ರತಿಭಟನೆ - ಭೀಮ ಆರ್ಮಿ ಕಾರ್ಯಕರ್ತ
ಕೇಂದ್ರ ಸರ್ಕಾರ ಸಾರ್ವಜನಿಕ ವಲಯಗಳನ್ನು ಖಾಸಗೀಕರಣ ಮಾಡುವತ್ತ ನಿರತವಾಗಿದ್ದು, ಬಂಡವಾಳಶಾಹಿ ವ್ಯವಸ್ಥೆ ಜಾರಿಗೆ ತರಲು ಹೊರಟಿದೆ ಎಂದು ಭೀಮ ಆರ್ಮಿ ಕಾರ್ಯಕರ್ತರು ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಕಾರ್ಯಕರ್ತರು, ಬಿಜೆಪಿ ಸರ್ಕಾರ ಬಡ ಜನರಿಗೆ ಮಾರಕವಾಗುವ ತಿದ್ದುಪಡಿ ಕಾಯ್ದೆಯನ್ನು ಜಾರಿ ಮಾಡುವುದಲ್ಲದೇ, ಬಂಡವಾಳಶಾಹಿ ವ್ಯವಸ್ಥೆ ಜಾರಿ ಮಾಡಲು ಹೊರಟಿದೆ. ಇತ್ತ ಕೊರೊನಾ ವೈರಸ್ ಭೀತಿಗೆ ಜನ ತತ್ತರಿಸಿ ಹೋಗಿರುವಾಗ ರೈತ ವಿರೋಧಿ, ಜನ ವಿರೋಧಿ ಕಾಯ್ದೆ ಜಾರಿ ಮಾಡುವಲ್ಲಿ ಸರ್ಕಾರ ನಿರತವಾಗಿದೆ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಸರ್ಕಾರ ಕೈಗಾರಿಕೋದ್ಯಮದ ಕೈಗೊಂಬೆಯಾಗಿ ರೈಲ್ವೆ, ಬ್ಯಾಂಕ್, ಎಲ್‌ಐಸಿ ಸೇರಿದಂತೆ ಇತರ ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀಕರಣ ಮಾಡಲು ಮುಂದಾಗಿರೋದು ಸರಿಯಲ್ಲ. ಇದರಿಂದ ಅನೇಕ ಜನರು ಉದ್ಯೋಗ ಕಳೆದುಕೊಳ್ಳುತ್ತಾರೆ. ಬಿಜೆಪಿ ಸರ್ಕಾರ ಖಾಸಗೀಕರಣ ಕೈ ಬಿಟ್ಟು ಜನಪರ ಯೋಜನೆ ಜಾರಿ ಮಾಡಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಮೂಲಕ ರಾಷ್ಟಪತಿಗಳಿಗೆ ಮನವಿ ಸಲ್ಲಿಸಲಾಯಿತು.