ವಿಜಯಪುರ :ಸೌಹಾರ್ದತೆಗೆ ಸಾಕ್ಷಿಯಾಗಿರೋ ವಿಜಯಪುರ ಜಿಲ್ಲೆಯ ಕತಕನಹಳ್ಳಿಯ ಸದಾಶಿವ ಮುತ್ಯಾ ಶಿವಯ್ಯ ಸ್ವಾಮೀಜಿ ಕಾಲಜ್ಞಾನ ಭವಿಷ್ಯ ನುಡಿದಿದ್ದಾರೆ. ಅಲ್ಲಿ ನುಡಿಯೋ ಭವಿಷ್ಯ ವಾಣಿ ಕೇಳಲು ರಾಜ್ಯ ಸೇರಿದಂತೆ ಹೊರ ರಾಜ್ಯಗಳಿಂದಲೂ ಸಾವಿರಾರು ಭಕ್ತರು ಆಗಮಿಸುತ್ತಾರೆ. ಪ್ರಸಕ್ತ ವರ್ಷದ ಭವಿಷ್ಯವಾಣಿ ಆಲಿಸಿರೋ ಭಕ್ತರು ಹಲವು ರೀತಿಯಲ್ಲಿ ವಿಶ್ಲೇಷಿಸುತ್ತಿದ್ದಾರೆ.
ಮಠದ ಪೀಠಾಧಿಪತಿ ಶಿವಯ್ಯ ಸ್ವಾಮೀಜಿಯವರು ಗ್ರಾಮದ ಕಟ್ಟೆಗೆ ಆಗಮಿಸಿದಾಗ ಅಲ್ಲಿ ಊರಿನ ಪ್ರಮುಖರು ಪಾದಪೂಜೆ ಸಲ್ಲಿಸುತ್ತಾರೆ. ಆ ಬಳಿಕ ಸಾವಿರಾರು ಭಕ್ತರನ್ನುದ್ದೇಶಿಸಿ ಶಿವಯ್ಯ ಸ್ವಾಮೀಜಿ ಭವಿಷ್ಯವಾಣಿ ನುಡಿಯುತ್ತಾರೆ. ಈ ವರ್ಷದ ಭವಿಷ್ಯವಾಣಿ ಜೊತೆಗೆ ಭಕ್ತರಿಗೆ ಸ್ವಾಮೀಜಿ ಹಲವು ಸಲಹೆ ನೀಡಿದ್ದಾರೆ. ಪ್ರಸಕ್ತವಾಗಿ ಜಾತಿ-ಜಾತಿ, ಧರ್ಮ-ಧರ್ಮಗಳ ಮಧ್ಯೆ ಉಂಟಾಗಿರುವ ವಿವಾದದ ಬಗ್ಗೆ ಸಲಹೆ ಸೂಚನೆ ನೀಡಿದ್ದಾರೆ. ಭಾರತೀಯ ಸಂಸ್ಕೃತಿ ಉಳಿಸಿ ಬೆಳೆಸುವ ಕೆಲಸ ಮಾಡಬೇಕೆಂದು ಭಕ್ತರಿಗೆ ಸ್ವಾಮೀಜಿ ಸಲಹೆ ನೀಡಿದರು.
ಕತಕನಹಳ್ಳಿ ಶ್ರೀ ಚಕ್ರವರ್ತಿ ಸದಾಶಿವ ಮುತ್ಯಾನ ಮಠದಲ್ಲಿ ನುಡಿದ ಭವಿಷ್ಯವಾಣಿ ಈವರೆಗೆ ಸುಳ್ಳಾಗಿಲ್ಲ. ಹೀಗಾಗಿ, ಇಲ್ಲಿ ನುಡಿಯೋ ಭವಿಷ್ಯವಾಣಿ ಕೇಳಲು ಮಹಾರಾಷ್ಟ್ರ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಿಂದ ಭಕ್ತರು ಬರುತ್ತಾರೆ. ಮೊದಲ ಪಂಕ್ತಿಯಲ್ಲಿ ಪ್ರಸಾದ ಸೇವಿಸಿದರೆ ಜೀವನದಲ್ಲಿ ಒಳಿತಾಗಲಿದೆ ಅನ್ನೋ ನಂಬಿಕೆ ಇಲ್ಲಿಗೆ ಆಗಮಿಸುವ ಭಕ್ತರಲ್ಲಿದೆ.