ವಿಜಯಪುರ: ರಾಜ್ಯದಲ್ಲಿ ಮತ್ತೊಮ್ಮೆ ಸಿಎಂ ಬದಲಾವಣೆ ವಿಷಯವನ್ನು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಕೆದಕಿದ್ದು, ಯುಗಾದಿಯೊಳಗೆ ಉತ್ತರ ಕರ್ನಾಟಕದೊಬ್ಬರು ರಾಜ್ಯದ ಚುಕ್ಕಾಣಿ ಹಿಡಿಯಲಿದ್ದಾರೆ ಎಂದು ಹೊಸ ಬಾಂಬ್ ಹಾಕಿದ್ದಾರೆ.
ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿಕೆ ವಿಜಯಪುರದಲ್ಲಿ ಮಾತನಾಡಿರುವ ಅವರು ಪದೇ ಪದೆ ಮಂತ್ರಿ ಸ್ಥಾನ ನೀಡಿರಿ ಎಂದು ಸಿಎಂ ಅವರನ್ನು ದುಂಬಾಲು ಬೀಳುವುದಿಲ್ಲ, ಕೆಲವೇ ದಿನದಲ್ಲಿ ಮಂತ್ರಿ ಸ್ಥಾನ ನೀಡುವವರೆ ಬರುತ್ತಾರೆ ಕಾದು ನೋಡಿ ಎನ್ನುವ ಮೂಲಕ ಸಿಎಂ ಬಿಎಸ್ ಯಡಿಯೂರಪ್ಪ ಬದಲಾವಣೆ ಕಾಲ ಕೂಡಿ ಬಂದಿದೆ ಎಂದು ಪರೋಕ್ಷವಾಗಿ ಹೇಳಿದರು.
ಈ ಹಿಂದೆ ಮೂರು ತಿಂಗಳು ಕಾದು ನೋಡಿ ಎಂದು ಹೇಳಿದ್ದು ಬೇರೆ ವಿಷಯಕ್ಕೆ, ಇದು ಮಹತ್ವದ ವಿಷಯ ಯುಗಾದಿಗೆ ಉತ್ತರ ಕರ್ನಾಟಕದವರು ಮಹತ್ವದ ಸ್ಥಾನ ಅಲಂಕರಿಸಲಿದ್ದಾರೆ ಎಂದರು.
ಹೆಚ್ಡಿಕೆ ಜೊತೆ ಮಾತುಕತೆ: ನಿನ್ನೆ ಸಿಂದಗಿಯಲ್ಲಿ ಶಾಸಕ ಎಂಸಿ ಮನಗೂಳಿ ಅವರ ಅಂತ್ಯಕ್ರಿಯೆ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ತಮ್ಮ ನಡುವೆ ಹಲವು ಮಹತ್ವದ ಚರ್ಚೆ ನಡೆದಿವೆ. ಅವರೇ ಹೇಳುವಂತೆ ರಾಜ್ಯದಲ್ಲಿ ವಿರೋಧ ಪಕ್ಷಗಳೇ ಇಲ್ಲದಂತಾಗಿದೆ. ನಿಜವಾದ ವಿರೋಧ ಪಕ್ಷ ಎಂದರೆ ಯತ್ನಾಳ್ ಎಂದು ಬೆನ್ನು ತಟ್ಟಿದ್ದಾರೆ. ನಮ್ಮ ಪಕ್ಷದಿಂದ ನಿಮ್ಮನ್ನು ಬಿಟ್ಟಿದ್ದು ಬಹಳ ತಪ್ಪಾಗಿದೆ. ನೀವು ಇನ್ನೂ ನಮ್ಮಲ್ಲಿ ಇರಬೇಕಾಗಿತ್ತು ಎಂದು ಮನನೊಂದರು ಎಂದ್ರು.
ಹಾಗಾದರೆ ಮತ್ತೆ ಜೆಡಿಎಸ್ಗೆ ಹೋಗುತ್ತೀರಾ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಯತ್ನಾಳ್, ಖಂಡಿತ ಇಲ್ಲ ಪಕ್ಷ ಬಿಡುವ ಮಾತೇ ಇಲ್ಲ, ಹಿಂದೆ ಬಿಜೆಪಿಯಿಂದ ಉಚ್ಛಾಟಿಸಿದ್ದಾಗ ಅನಿರ್ವಾಯವಾಗಿ ಜೆಡಿಎಸ್ಗೆ ಹೋದೆ ಅಷ್ಟೇ, ನಾನು ಪಕ್ಕ ಹಿಂದೂವಾದಿ ಹಿಂದುತ್ವ ಬೆಳೆಸುವ ಕೆಲಸ ಮಾಡುತ್ತೇನೆ ಎಂದರು.
ಪರಿಷತ್ನಲ್ಲಿ ಬ್ಲೂ ಫಿಲ್ಮ್ ವೀಕ್ಷಣೆ: ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಥೋಡ್ ಪರಿಷತ್ನಲ್ಲಿ ಬ್ಲೂ ಫಿಲ್ಮ್ ವೀಕ್ಷಿಸುವ ಆರೋಪ ಕುರಿತು ಪ್ರತಿಕ್ರಿಯೆ ನೀಡಿದ ಯತ್ನಾಳ್, ವಿಧಾನಸಭೆ ಮತ್ತು ಪರಿಷತ್ನಲ್ಲಿ ಮೊಬೈಲ್ ತೆಗೆದುಕೊಂಡು ಹೋಗಬಾರದು ಎಂದು ನಿಯಮವಿದೆ. ಇದೇ ಕಾರಣಕ್ಕೆ ಎಲ್ಲ ಶಾಸಕರಿಗೆ ಮೊಬೈಲ್ ಇಡಲು ಸ್ಥಳಾವಕಾಶ ನೀಡಿದ್ದಾರೆ. ಆದರೂ ಕೆಲವರು ಮೊಬೈಲ್ ತೆಗೆದುಕೊಂಡು ಹೋಗಿ ರಾಜ್ಯದ ಘನತೆಗೆ ಧಕ್ಕೆ ತರುತ್ತಿದ್ದಾರೆ. ಈ ಬಗ್ಗೆ ಪರಿಷತ್ ಸಭಾಪತಿಗಳು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ:ಗಾಂಧಿ ಫೋಟೋಗೆ ಸಿಎಂ ಮಾಲಾರ್ಪಣೆ.. ಯಡಿಯೂರಪ್ಪರಿಂದ ಸಿಟಿ ರೌಂಡ್ಸ್