ವಿಜಯಪುರ: ಸಿಎಂ ಪುತ್ರ ವಿಜಯೇಂದ್ರ ಅವರ ದೆಹಲಿ ಪ್ರವಾಸ ಯಶಸ್ವಿಯಾಗಿದ್ದು, ರಾಜ್ಯ ಬಿಜೆಪಿಯಲ್ಲಿ ಬಿಎಸ್ವೈ ಕುರ್ಚಿ ಗಟ್ಟಿಯಾಗಿದೆ ಎನ್ನುವುದು ಕೇವಲ ಮಾಧ್ಯಮಗಳ ಸೃಷ್ಟಿಯಾಗಿದೆ. ವಿಜಯೇಂದ್ರ ದೆಹಲಿಗೆ ಹೋಗಿದ್ದು ಜಾರಿ ನಿರ್ದೇಶನಾಲಯ(ಇಡಿ)ದ ವಿಚಾರಣೆ ಎದುರಿಸಲು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಗಂಭೀರ ಆರೋಪ ಮಾಡಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮಾರಿಷಸ್ನಲ್ಲಿ ಇಟ್ಟಿರುವ ಹಣ ಎಲ್ಲಿಂದ ಬಂತು? ಕಿಯೋ ಕಂಪನಿಗೆ ವರ್ಗಾವಣೆ ಆಗಿದ್ದು ಹೇಗೆ? ಎನ್ನುವ ಕುರಿತು ಕಳೆದ ಮೂರು ದಿನಗಳಿಂದ ಇಡಿ ವಿಚಾರಣೆ ನಡೆಸಿದೆ ಹೊರತು ರಾಷ್ಟ್ರೀಯ ನಾಯಕರ ಜತೆ ಮಾತುಕತೆ ನಡೆದಿರುವುದು ಸುಳ್ಳು ಎಂದರು.
ಈಗಾಗಲೇ ವರಿಷ್ಠರಿಂದ ಸ್ಪಷ್ಟ ಮಾಹಿತಿ ತಮಗೆ ದೊರೆತಿದೆ ಎಂದ ಅವರು, ವಿಜಯೇಂದ್ರ ಕೇವಲ 10 ನಿಮಿಷ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರನ್ನು ಭೇಟಿಯಾಗಿರಬಹುದು. ಅದನ್ನು ಬಿಟ್ಟು 1 ಗಂಟೆ ಸುದೀರ್ಘ ಚರ್ಚೆ ನಡೆಸಿದ್ದಾರೆ ಎನ್ನುವುದು ಮಾಧ್ಯಮಗಳ ಸೃಷ್ಟಿಯಾಗಿದೆ ಎಂದರು.
ಕೋವಿಡ್ ವಿಚಾರ ಹಾಗೂ ಪಕ್ಷದ ಆಂತರಿಕ ವಿಚಾರವನ್ನು ರಾಜ್ಯ ಉಪಾಧ್ಯಕ್ಷರ ಜತೆ ಮಾತನಾಡುವ ಅವಶ್ಯಕತೆ ರಾಷ್ಟ್ರೀಯ ನಾಯಕರಿಗೇಕೆ ಇದೆ ಎಂದು ಪ್ರಶ್ನಿಸಿದರು. ಅದಕ್ಕೆ ರಾಜ್ಯಾಧ್ಯಕ್ಷರು, ಸಿಎಂ ಇದ್ದಾರೆ. ಅವರ ಜತೆ ಮಾತನಾಡುತ್ತಾರೆ ಹೊರತು ಉಪಾಧ್ಯಕ್ಷರ ಜತೆ ಏಕೆ? ಹಾಗಿದ್ದರೆ ರಾಜ್ಯ ಉಪಾಧ್ಯಕ್ಷರು 9 ಜನ ಇದ್ದಾರೆ. ಅವರನ್ನು ಬಿಟ್ಟು ವಿಜಯೇಂದ್ರ ಜತೆ ಮಾತನಾಡಿದ್ದಾರೆ ಎನ್ನುವದು ಸತ್ಯಕ್ಕೆ ದೂರವಾದ ಮಾತು ಎಂದರು.