ವಿಜಯಪುರ: ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ವಿರೋಧಿಸಿ ಡಿ. 5ರಂದು ಕನ್ನಡಪರ ಸಂಘಟನೆಗಳು ನೀಡಿರುವ ಕರ್ನಾಟಕ ಬಂದ್ ಕರೆಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಅವರು, ನಾವು ಮೊದಲು ಹಿಂದುಗಳು. ನಮ್ಮ ರಕ್ಷಣೆ ಮಾಡಿದ ಶಿವಾಜಿ ಮಹಾರಾಜರ ಸಮುದಾಯಕ್ಕೆ ಇನ್ನೂ ಹೆಚ್ಚಿನ ಸೌಲಭ್ಯ ಒದಗಿಸಬೇಕು ಎಂದರು. ವಿಜಯಪುರದಲ್ಲಿ ಹೇಗೆ ಬಂದ್ ಮಾಡುತ್ತಾರೋ ನೋಡೋಣ. ಸುಮ್ಮನೆ ಕನ್ನಡದ ಹೆಸರಿನಲ್ಲಿ ಹೋರಾಟ ಮಾಡುವುದು ಸರಿಯಲ್ಲ ಎಂದರು.
ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಕನ್ನಡ ಮತ್ತು ಸಂಸ್ಕೃತಿ ಹೆಸರಿನಲ್ಲಿ ವಾಟಾಳ್ ನಾಗರಾಜ್ ಸೇರಿದಂತೆ ಕನ್ನಡಪರ ಸಂಘಟನೆಗಳ ಮುಖಂಡರು ಎಷ್ಟು ಅನುದಾನ ಪಡೆದಿದ್ದಾರೆ ಎಂದು ಪ್ರಶ್ನಿಸಿದರು. ಅವರು ಸರ್ಕಾರದಿಂದ ಪಡೆದ ಹಣವನ್ನು ಯಾವುದಾದರೂ ಬೇರೆ ಕನ್ನಡಪರ ಸಂಘಟನೆಗಳಿಗೆ ನೀಡಿದ್ದಾರಾ? ಇವರೆಲ್ಲ ಬೆಂಗಳೂರಿನ ಹೋಟೆಲ್ನಲ್ಲಿ ಕುಳಿತು ಹೋಟೆಲ್ ತಮ್ಮದೆಂದು ಹೇಳುತ್ತಾರೆ ಎಂದರು. ವಾಟಾಳ್ ನಾಗರಾಜ್ ಅವರಿಂದ ನಾವೇನೂ ಕಲಿಯಬೇಕಾಗಿಲ್ಲ. ಮರಾಠ ಸಮುದಾಯಕ್ಕೆ ನೀಡಿರುವ ಪ್ರಾಧಿಕಾರಕ್ಕೆ ನಮ್ಮ ಬೆಂಬಲವಿದೆ ಎಂದ ಅವರು, ಸಿಎಂ ಏನಾದರೂ ಅಭಿವೃದ್ಧಿ ಪ್ರಾಧಿಕಾರ ಹಿಂಪಡೆದರೆ ದೊಡ್ಡ ಅನಾಹುತವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರಾಜ್ಯ ಸರ್ಕಾರ ಮರಾಠ ಅಭಿವೃದ್ಧಿ ಪ್ರಾಧಿಕಾರ ಮಾಡಿಲ್ಲ. ಮರಾಠ ಸಮುದಾಯವು ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಿದೆ ಎಂದರು. ದೇಶದಲ್ಲಿ ಹಿಂದೂ ಧರ್ಮ ಉಳಿಯಲು, ಇಂದು ನಾವೆಲ್ಲಾ ಹಿಂದೂಗಳಾಗಿ ಉಳಿಯಲು ಛತ್ರಪತಿ ಶಿವಾಜಿ ಮಹಾರಾಜರು ಕಾರಣ ಎಂದರು. ಮರಾಠ ಸಮುದಾಯ ಯಾವಾಗಲೂ ಹಿಂದೂ ಪರವಾಗಿದೆ. ಧರ್ಮದ, ದೇಶದ ಪರವಾಗಿ ಹೋರಾಟ ಮಾಡಿದ ಸಮುದಾಯ ಇದಾಗಿದೆ. ಆ ಸಮುದಾಯಕ್ಕೆ ಸರ್ಕಾರ ಕಾನೂನಾತ್ಮಕವಾಗಿ ಆ ಪ್ರಾಧಿಕಾರಕ್ಕೆ ಏನೆಲ್ಲಾ ಕೊಡಲು ಸಾಧ್ಯವೋ ಅದನ್ನೆಲ್ಲಾ ಕೊಡಬೇಕು ಎಂದರು.