ವಿಜಯಪುರ:ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಮತ್ತೆ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೊರೆಸ್ವಾಮಿ ಅವರ ನಡವಳಿಕೆಗಳೇ ಅವರು ಹೇಗಿದ್ದಾರೆ ಎಂಬುದಕ್ಕೆ ಸಾಕ್ಷಿ. ಅವರು ಕಾಂಗ್ರೆಸ್, ಜೆಡಿಎಸ್‌ನ ಮುಖವಾಣಿಯಾಗಿದ್ದಾರೆಂದು ಆರೋಪಿಸಿದರು. ಅವರ ವಿರುದ್ಧ ನೀಡಿರುವ ಹೇಳಿಕೆ ಹಿಂಪಡೆಯಲು ಸಾಧ್ಯವೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಪಾಕ್ ಪರ ಘೋಷಣೆ ಕೂಗಿದ ಅಮೂಲ್ಯ ವಿರುದ್ಧ, ಸಿಎಎ ವಿರೋಧಿ ಹೋರಾಟದ ಬಗ್ಗೆ ಯಾಕೆ ದೊರೆಸ್ವಾಮಿ ಈವರೆಗೂ ಒಂದು ಹೇಳಿಕೆ ನೀಡಿಲ್ಲ. ಅದು ತಪ್ಪಲ್ಲವೇ? ಎಂದು ಪ್ರಶ್ನಿಸಿದರು. ಕಾಂಗ್ರೆಸ್, ದೇಶವಿರೋಧಿ ಚಟುವಟಿಕೆಗಳನ್ನು ಮಾಡುವವರ ವಿರುದ್ಧ. ದೇಶ ವಿರೋಧಿಗಳ ವಿರುದ್ಧ ಹೋರಾಟ ಮಾಡಲಿ ಅದು ಬಿಟ್ಟು ನನ್ನ ವಿರುದ್ಧ ಹೋರಾಟ ಮಾಡುವುದರಿಂದ ಅವರಿಗೇನೂ ಲಾಭವಿಲ್ಲ. ನಾನು ಕಾಂಗ್ರೆಸ್ಸಿಗರ ಯಾವುದೇ ಗೊಡ್ಡು ಬೆದರಿಕೆಗಳಿಗೆ ಹೆದರುವುದಿಲ್ಲ ಎಂದರು.
ಪಾಕಿಸ್ತಾನದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯವಾದರೆ ಭಾರತೀಯ ಪೌರತ್ವ ನೀಡಿ ಎಂದು ಮಹಾತ್ಮಾ ಗಾಂಧಿ ಹೇಳಿದ್ದಾರೆ. ಆದರೆ, ಅವರ ತತ್ವಗಳನ್ನು ಎಂದೂ ದೊರೆಸ್ವಾಮಿ ಪುನರುಚ್ಚರಿಸಿಲ್ಲ. ಹೀಗಿರುವಾಗ ದೊರೆಸ್ವಾಮಿ ಅದು ಹೇಗೆ ಮಹಾತ್ಮಾ ಗಾಂಧಿ ಅನುಯಾಯಿಯಾಗಲು ಸಾಧ್ಯ ಎಂದರು. ಅಲ್ಲದೇ ತಮ್ಮ ಸ್ವಾರ್ಥಕ್ಕಾಗಿ ಕಾಂಗ್ರೆಸ್ ಪಕ್ಷ ಗಾಂಧಿ ಹೆಸರನ್ನು ಈವರೆಗೆ ಬಂಡವಾಳ ಮಾಡಿಕೊಂಡಿದೆ ಎಂದರು.
ದೆಹಲಿ ಹಿಂಸಾಚಾರ ವಿಚಾರವಾಗಿ ಪ್ರತಿಕ್ರಿಯಿಸಿ, ದೇಶದ ವಿರುದ್ಧ ನಡೆಯುತ್ತಿರುವ ಹೋರಾಟವಿದು. ಈ ಪ್ರತಿಭಟನೆಯಿಂದ ದೆಹಲಿಯಲ್ಲಿ ಶಾಂತಿ ಕದಡಿದೆ. ಎಷ್ಟೋ ಅಂಗಡಿಗಳು ಧ್ವಂಸವಾಗಿವೆ. ಈ ಕುರಿತು ಸೋನಿಯಾ ಗಾಂಧಿ ಯಾಕೆ ಇನ್ನೂ ಪ್ರತಿಕ್ರಿಯಿಸಿಲ್ಲ. ಸೋನಿಯಾ ಗಾಂಧಿ ಮತ್ತು ಯಾವುದೇ ವಿರೋಧ ಪಕ್ಷಗಳಿಗೆ ಅಮಿತ್ ಶಾ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದರು.