ವಿಜಯಪುರ: ಜೆಡಿಎಸ್ ಪಕ್ಷವನ್ನು ತಾಲಿಬಾನಿಗೆ ಹೋಲಿಸಿರುವ ಬಿಜೆಪಿ ಫೈರ್ ಬ್ರ್ಯಾಂಡ್ ಶಾಸಕ ಬಸನಗೌಡ ಪಾಟೀಲ ಯತ್ನಾಳ್, ಆರ್ಎಸ್ಎಸ್ ಬಗ್ಗೆ ನೀವು ಏಕೆ ಆರೋಪ ಮಾಡುತ್ತಿದ್ದೀರಿ, ಅವರೇನು ಎಕೆ 47 ಕೊಟ್ಟು ಭಯೋತ್ಪಾದಕರನ್ನು ರೆಡಿ ಮಾಡುತ್ತಿದ್ದಾರಾ? ಎಂದು ಪ್ರಶ್ನಿಸಿದರು.
ಜೆಡಿಎಸ್ ತಾಲಿಬಾನಿ ಸಂಸ್ಕೃತಿ ಹೊಂದಿದೆ: ಯತ್ನಾಳ್ ವಾಗ್ದಾಳಿ - ಕುಮಾರಸ್ವಾಮಿ ಆರ್ಎಸ್ಎಸ್
ಆರ್ ಎಸ್ ಎಸ್ ಕುರಿತು ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ನೀಡಿರುವ ಹೇಳಿಕೆಗೆ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಟಾಂಗ್ ಕೊಟ್ಟಿದ್ದಾರೆ.
ಸಿಂಧಗಿಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ನಾಮಪತ್ರ ಸಲ್ಲಿಸಿದ ನಂತರ ಅಂಜುಮನ್ ಕಾಲೇಜ್ ಮೈದಾನದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಸುಮ್ಮನೆ ಯಾಕೆ ಆರ್ಎಸ್ಎಸ್ ಬಗ್ಗೆ ಮಾತನಾಡುತ್ತೀರಿ, ತಾಕತ್ತು ಇದ್ದರೆ ನಮ್ಮ ಜೊತೆಗೆ ಕುಸ್ತಿಗೆ ಬನ್ನಿ ಎಂದು ಸವಾಲೆಸೆದರು. ಜೊತೆಗೆ ರಾಹುಲ್ ಗಾಂಧಿ ಒಬ್ಬ ಜೋಕರ್, ಬಾಯಿಗೆ ಬಂದ ಹಾಗೆ ಮಾತನಾಡುತ್ತಾರೆ ಎಂದು ಟೀಕಾ ಪ್ರಹಾರ ನಡೆಸಿದರು.
ಪೆಟ್ರೋಲ್, ಡೀಸೆಲ್ ಬಗ್ಗೆ ನೀವು ತಲೆ ಕೆಡಿಸಿಕೊಳ್ಳಬೇಡಿ, ಮೋದಿ ಪ್ರಧಾನಿಯಾಗಿದ್ದರಿಂದಲೇ ನಮ್ಮ ದೇಶ ಉಳಿದಿದೆ. ತೈಲ ದರ ಏರಿಕೆ ಖಂಡಿಸಿ ಎತ್ತಿನ ಗಾಡಿ ಹತ್ತಿ ಪ್ರತಿಭಟನೆ ಮಾಡುತ್ತಿರುವವರು ಬೆಂಜ್ ಕಾರಿನಲ್ಲಿ ಸಂಚರಿಸುತ್ತಾರೆ ಎಂದರು.