ಮಾಧ್ಯಮಗಳೊಂದಿಗೆ ಮಾತನಾಡಿದ ಬಸನಗೌಡ ಪಾಟೀಲ ಯತ್ನಾಳ್ ವಿಜಯಪುರ: ತಮ್ಮ ಈ ಹಿಂದಿನ ಕಾರು ಚಾಲಕನ ಸಾವಿನ ಬಗ್ಗೆ ಸಚಿವ ಮುರುಗೇಶ ನಿರಾಣಿ ಮಾಡಿದ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆಯುವ ಮೂಲಕ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಪ್ರತ್ಯುತ್ತರ ನೀಡಿದ್ದಾರೆ. ನಿರಾಣಿ ಹೇಳಿಕೆ ಬೆನ್ನಲ್ಲೇ ಸಿಎಂಗೆ ಪತ್ರ ಬರೆದಿರುವ ಯತ್ನಾಳ್, ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ತಿಳಿಸಿದ್ದಾರೆ. ಸಂಪುಟದ ಸದಸ್ಯರು ಈ ರೀತಿ ಆರೋಪ ಮಾಡಿರುವ ಬಗ್ಗೆ ಸತ್ಯಾಸತ್ಯತೆ ತಿಳಿಯಲಿ, ವಿಜಯಪುರದ ಯಾವುದೋ ಕಾರು ಚಾಲಕನ ಬಗ್ಗೆ ಮಾಧ್ಯಮಗಳ ಮುಂದೆ ಗಂಭೀರ ಆರೋಪ ಮಾಡಿದ್ದಾರೆ. ಇಂತಹ ಆರೋಪದಿಂದ ಸರ್ಕಾರಕ್ಕೆ ತಪ್ಪು ಸಂದೇಶ ಬರುತ್ತದೆ ಎಂದು ಉಲ್ಲೇಖಿಸಿದ್ದಾರೆ.
ಸುಳ್ಳು ಆರೋಪ ಮಾಡಿದ ಸಚಿವರನ್ನು ಸಂಪುಟದಿಂದ ವಜಾಗೊಳಿಸಬೇಕು. ದೇಶದ ಜನತೆಗೆ ಇದರ ಬಗ್ಗೆ ಸತ್ಯಾಸತ್ಯತೆ ಗೊತ್ತಾಗಬೇಕಿದೆ. 24 ಗಂಟೆಯ ಒಳಗಾಗಿ ಸಿಬಿಐ ತನಿಖೆಗೆ ಶಿಫಾರಸು ಮಾಡುವಂತೆ ಯತ್ನಾಳ್ ಪತ್ರದಲ್ಲಿ ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ:ನಮಗೂ ಮಾತನಾಡುವುದಕ್ಕೆ ಬರುತ್ತದೆ, ಸುಮ್ಮನೆ ಇದ್ದೀವಿ ಅಂದರೆ ದೌರ್ಬಲ್ಯ ಅಲ್ಲ: ಯತ್ನಾಳ್ಗೆ ನಿರಾಣಿ ಟಾಂಗ್
ನಿರಾಣಿ ಆರೋಪ ಏನು?:ನಿನ್ನೆ ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ಸಚಿವ ಮುರುಗೇಶ್ ನಿರಾಣಿ, 'ನೀವು ಬಾಯಿ ಮುಚ್ಚಿ, ಇಲ್ಲವಾದರೆ ನಾಲಿಗೆ ಕೀಳಬೇಕಾಗುತ್ತದೆ ಹುಷಾರ್. ಪಕ್ಷದ ಬಗ್ಗೆ ಗೌರವ ಇಲ್ಲ ಎಂದರೆ ಇಲ್ಲಿ ಏಕೆ ಇದಿಯಾ?, ದೊಂಬರಾಟ ಸಾಕಾಗಿದೆ' ಎಂದು ಯತ್ನಾಳ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬಸನಗೌಡ ಪಾಟೀಲ ಯತ್ನಾಳ್ ಅವರ ಈಗಿನ ಕಾರು ಚಾಲಕನ ಸಂಬಂಧಿಯೊಬ್ಬ ಈ ಹಿಂದೆ ಅವರದ್ದೇ ಕಾರಿನ ಚಾಲಕನಾಗಿದ್ದ. ಅವನ ಕೊಲೆಯಾಗಿದೆ. ಅವನ ಕೊಲೆ ಯಾರು ಮಾಡಿದ್ದಾರೆ?. ಕುಮಾರ್ ಎಂಬ ವ್ಯಕ್ತಿಯ ಕೊಲೆ ಯಾಕಾಯಿತು? ಹೇಗಾಯಿತು? ಯಾರು ಮಾಡಿದರು ಎಂದು ಹೇಳಿ. ಕಾರು ಚಾಲಕನ ಸಾವಿನ ಬಗ್ಗೆ ಮಾಧ್ಯಮದವರು ತನಿಖೆ ಮಾಡಬೇಕು ಎಂದಿದ್ದರು.
ಇದನ್ನೂ ಓದಿ:ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದ ಮುರುಗೇಶ್ ನಿರಾಣಿ
'ನಿಮ್ಮದು ಡ್ರಾಮಾ ಮಾಡುವ ಕಂಪನಿ. ಒಂದೊಂದು ಪಕ್ಷಕ್ಕೆ ಹೋದಾಗ ಒಂದೊಂದು ರೀತಿ ನಡೆದುಕೊಂಡಿದ್ದೀರಿ. ಇಲ್ಲಿವರೆಗೆ ಪಕ್ಷ, ಸರ್ಕಾರ ಸಹನೆಯಿಂದ ಇದೆ. ಸುಮ್ಮನಾಗಿ ಉಳಿದಿಲ್ಲ ಅಂದರೆ ಪರಿಸ್ಥಿತಿ ಸರಿ ಇರಲ್ಲ. ಮೇಲಿಂದ ಟಿಕೆಟ್ ತೆಗೆದುಕೊಂಡು ಬರುತ್ತೇನೆ ಎಂಬ ಉಡಾಫೆ ಬೇಡ. ಪಕ್ಷದ ಮೇಲೆ ಗೌರವ ಇಲ್ಲ ಎಂದ ಮೇಲೆ ಈ ಪಕ್ಷದಲ್ಲಿ ಏಕೆ ಇರುತ್ತೀಯಾ. ರಾಜೀನಾಮೆ ಕೊಟ್ಟು ಹೋಗಿ. ಬೇರೆ ಕಡೆ ನಿಂತು ಗೆದ್ದು ನೋಡು. ಇದೇ ಸ್ಥಿತಿ ಮುಂದುವರಿದರೆ ಕ್ಷೇತ್ರದ ಜನ, ಬಿಜೆಪಿಯವರು ತಕ್ಕ ಪಾಠ ಕಲಿಸುತ್ತಾರೆ' ಎಂದು ಎಚ್ಚರಿಸಿದ್ದರು. ಈ ಬೆನ್ನಲ್ಲೇ ಇದೀಗ ಸಿಎಂಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪತ್ರ ಬರೆದಿದ್ದಾರೆ.