ವಿಜಯಪುರ : ಈಗಿನ ಗೃಹ ಸಚಿವರಿಗೆ ಫಾರೆಸ್ಟ್ ಅಥವಾ ರೆವಿನ್ಯೂ ನೀಡಿ. ನನಗೆ ಗೃಹ ಖಾತೆ ಕೊಟ್ಟು ನೋಡಿ ಎಲ್ಲರಿಗೂ ಹೇಗೆ ಪಾಠ ಕಲಿಸ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಪರೋಕ್ಷವಾಗಿ ಗೃಹ ಖಾತೆಗೆ ಬೇಡಿಕೆಯಿಟ್ಟ ಶಾಸಕ ಯತ್ನಾಳ್ ಗೃಹ ಖಾತೆ ಕುರಿತು ಯತ್ನಾಳ್ ಹೇಳಿಕೆ :ನಗರದ ರಂಗ ಮಂದಿರದಲ್ಲಿ ನಡೆದ 1971ನೇ ಭಾರತ-ಪಾಕಿಸ್ತಾನ ಯುದ್ಧ ಸುವರ್ಣ ವಿಜಯ ವರ್ಷ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗಿನ ಗೃಹ ಸಚಿವರು ಒಳ್ಳೆಯವರಿದ್ದಾರೆ, ಸಂಭಾವಿತರಿದ್ದಾರೆ. ನನಗೆ ಗೃಹ ಸಚಿವ ಸ್ಥಾನ ಕೊಟ್ಟು ನೋಡಿ, ಎಲ್ಲರಿಗೂ ಹೇಗೆ ಉತ್ತರ ಕೊಡ್ತೀನಿ ನೋಡಿ. ಮಂಗಳೂರಿನಲ್ಲಿ ಗಲಾಟೆ ಮಾಡಿದವರಿಗೆ ಪಾಠ ಕಲಿಸ್ತೇನೆ. ಪೊಲೀಸರ ಮೇಲೆ ದಾಳಿ ಮಾಡಿದರೆ ಸುಮ್ಮನಿರಬೇಕಾ ಎಂದು ಕಿಡಿಕಾರಿದರು.
ಬಿಎಸ್‌ವೈ ಗಾಯಕ್ಕೆ ಮತ್ತೆ ಉಪ್ಪು ಸುರಿದ ಯತ್ನಾಳ್ :ಮೊನ್ನೆ ಒಬ್ಬರನ್ನು ನಾನೇ ಖುರ್ಚಿಯಿಂದ ಕೆಳಗೆ ಇಳಿಸಿದ್ದೇನೆ, ನನಗೆ ಇಳಿಸುವುದು ಗೊತ್ತು ಏರಿಸುವುದು ಗೊತ್ತು. ಏನಪ್ಪಾ ನಿನ್ನ ಜೊತೆ ಹೊಂದಾಣಿಕೆ ಇದ್ದಿದ್ದರೆ ಇನ್ನೂ ಎರಡು ವರ್ಷ ನಾನೇ ಸಿಎಂ ಆಗಿರುತ್ತಿದ್ದೆ ಎಂದು ಪಶ್ಚಾತಾಪ ಪಟ್ಟರು, ಆಗ ನಾನು ಅದೇ ಹೇಳಿದೆ, ಜನರು ಕೊಟ್ಟ ಅಧಿಕಾರವನ್ನು ಸರಿಯಾಗಿ ಉಪಯೋಗಿಸಿದ್ದರೆ, ಅವರ ಮನೆಯಲ್ಲಿ ನಿಮ್ಮ ಪೋಟೋ ಇಟ್ಟು ಪೂಜೆ ಮಾಡುತ್ತಿದ್ದರು, ಈಗ ಆ ಅವಕಾಶ ಕಳೆದುಕೊಂಡಿರಿ ಎಂದು ಹೇಳುವ ಮೂಲಕ ಬಿಎಸ್‌ವೈ ಸದ್ಯದ ಅಸಹಾಯಕತೆ ಎತ್ತಿ ತೋರಿಸಿದರು.
ನಾನು ಯಾರಿಗೂ ಸಲಾಂ ಹೊಡೆಯಲ್ಲ : ಬೆಳಗಾವಿ ವಿಧಾನಸಭೆಯಲ್ಲಿ ನಾನು ಕುಳಿತುಕೊಳ್ಳುವ ಖುರ್ಚಿ ಸಹ ಹೇಗಿದೆ ಎಂದರೆ, ಎಲ್ಲರು ನನ್ನ ಬಳಿ ಬಂದೇ ಹೋಗಬೇಕು, ನಾನು ಮಾತ್ರ ಯಾರಿಗೂ ಸಲಾಂ ಹೊಡೆಯುವದಿಲ್ಲ ಎಂದರು.
ಬೋಗಸ್ ಭರವಸೆ :ಎರಡು ದಿನಗಳ ಹಿಂದೆ ಯತ್ನಾಳ್ ಯಡಿಯೂರಪ್ಪ ಭೇಟಿ ವಿಚಾರವನ್ನು ಸಹ ಪ್ರಸ್ತಾಪಿಸಿ, ಮರಾಠಾ ಸಮಾಜದ ಮೀಸಲಾತಿ ವಿಚಾರ ಸಂಬಂಧ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ವೇಳೆ ಯಡಿಯೂರಪ್ಪ ಸಿಕ್ಕಿದ್ದರು ಏನಪ್ಪಾ ಈ ಕಡೆ ಅಂದರು, ನೀವು ನೀಡಿದ ಬೋಗಸ್ ಭರವಸೆ ಸರಿಪಡಿಸಿಕೊಳ್ಳಲು ಬಂದಿದ್ದೇನೆ ಎಂದು ಹೇಳಿದ್ದಾಗಿ ತಿಳಿಸಿದರು.