ವಿಜಯಪುರ: ಕೊನೆಗೂ ಬಿಜೆಪಿ ರೆಬೆಲ್ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ನಾಯಕತ್ವ ವಿರೋಧಿ ಹೇಳಿಕೆಗೆ ಕೇಂದ್ರ ಬಿಜೆಪಿ ಮುಖಂಡರು ತಾತ್ಕಾಲಿಕವಾಗಿ ಬೀಗ ಹಾಕಿರುವುದು ಸ್ಪಷ್ಟವಾಗಿದೆ. ಇಂದು ತಮ್ಮ ಫೇಸ್ಬುಕ್ ಪೋಸ್ಟ್ ಸಿಎಂ ಹಾಗೂ ಅವರ ಪುತ್ರನ ವಿರುದ್ಧ ಹೆಸರು ಪ್ರಸ್ತಾಪಿಸದೇ ಪರೋಕ್ಷವಾಗಿ ವಾಗ್ದಾಳಿ ನಡೆಸಿರುವುದು ಇದಕ್ಕೆ ಪುಷ್ಟಿ ನೀಡಿದೆ.
ಯತ್ನಾಳ್ ತಮ್ಮ ಫೇಸ್ಬುಕ್ ಅಕೌಂಟ್ ಮೂಲಕ ಹಣದಿಂದ ಕೆಲವು ನಾಯಕರನ್ನು ಖರೀದಿಸಬಹುದು. ಆದರೆ, ನೈತಿಕತೆ ಇರುವವರನ್ನು, ಮೌಲ್ಯ ಉಳ್ಳವರನ್ನು ಖರೀದಿ ಮಾಡಲು ಸಾಧ್ಯವಿಲ್ಲ ಎಡೇಂದ್ರ ಎಂದು ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಮತ್ತೊಮ್ಮೆ ಮಾರ್ಮಿಕವಾಗಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮೂರು ದಿನ ಕಾಲ ಬೆಂಗಳೂರಿಗೆ ಭೇಟಿ ನೀಡಿದ್ದ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ ಸಿಂಗ್, ಸಿಎಂ ಪರ - ವಿರೋಧ ಶಾಸಕರ ಜತೆ ಮಾತುಕತೆ ನಡೆಸಿ ಹೋಗಿದ್ದರು. ಈ ವೇಳೆ ಶಾಸಕ ಯತ್ನಾಳ ಅರುಣ್ ಸಿಂಗ್ ಅವರನ್ನು ಭೇಟಿಯಾಗಿರಲಿಲ್ಲ. ಇದಕ್ಕೆ ಯತ್ನಾಳ್ ಫೇಸ್ಬುಕ್ ಮೂಲಕವೇ ಪೋಸ್ಟ್ ಮಾಡಿ ಅವರನ್ನು ಭೇಟಿಯಾಗಲು ತಾವು ಸಮಯ ಕೇಳಿಲ್ಲ ಎನ್ನುವ ಮೂಲಕ ಅರುಣ್ ಸಿಂಗ್ ಅವರ ವಿರುದ್ಧವೇ ಪರೋಕ್ಷವಾಗಿ ಅಸಮಾಧಾನ ತೋಡಿ ಕೊಂಡಿದ್ದರು.