ವಿಜಯಪುರ:ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗೆ ಇಳಿಸಿದ್ದು ಕೇವಲ ಅವರಿಗೆ ವಯಸ್ಸಾಗಿತ್ತು ಎನ್ನುವ ಕಾರಣಕ್ಕೆ. ಮುಂದೆ ಅವರೇ ಶಾಸಕ ಸ್ಥಾನಕ್ಕೆ ನಿಲ್ಲುವುದಿಲ್ಲವೆಂದು ಘೋಷಣೆ ಮಾಡಿದ್ದಾರೆ. ಆದರೆ ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿಗೆ ಟಿಕೆಟ್ ಕೈ ತಪ್ಪಿದ್ದಕ್ಕೆ ಕಾಂಗ್ರೆಸ್ ಸೇರಿರುವುದು ಯಾವ ನ್ಯಾಯ? ತಾಕತ್ತು ಇದ್ದರೆ ಪಕ್ಷೇತರವಾಗಿ ಕಣದಲ್ಲಿ ನಿಂತು ಗೆದ್ದು ತೋರಿಸಲಿ ಎಂದು ವಿಜಯಪುರ ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ್ ಯತ್ನಾಳ್ ಸವಾಲು ಹಾಕಿದರು.
ಕಾಂಗ್ರೆಸ್ ಸೇರಿ ಬಿಜೆಪಿಗೆ ದ್ರೋಹ ಬಗೆದಿದ್ದೀರಿ: ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಗದೀಶ ಶೆಟ್ಟರ್, ಲಕ್ಷ್ಮಣ ಸವದಿಗೆ ಬಿಜೆಪಿ ಎಲ್ಲವನ್ನೂ ಕೊಟ್ಟಿತ್ತು. ಟಿಕೆಟ್ ಕೈ ತಪ್ಪಿದ ಕಾರಣ ಪಕ್ಷಕ್ಕೆ ದ್ರೋಹ ಬಗೆಯಬಾರದು. ಹಿಂದೆ ನನಗೂ ಟಿಕೆಟ್ ಕೈತಪ್ಪಿತ್ತು. ಆದರೆ ನಾನು ಪಕ್ಷ ಬಿಟ್ಟಿರಲಿಲ್ಲ. ಪಕ್ಷದಿಂದ ಉಚ್ಚಾಟನೆ ಮಾಡಿದ ಮೇಲೆ ಅನಿವಾರ್ಯವಾಗಿ ಜೆಡಿಎಸ್‌ಗೆ ಹೋಗಿದ್ದೆ. ಅಲ್ಲಿಯ ವಾತಾವರಣ ನೋಡಿ ವಿಜಯಪುರ-ಬಾಗಲಕೋಟೆ ಎಂಎಲ್‌ಸಿಗೆ ಪಕ್ಷೇತರನಾಗಿ ನಿಂತು ಗೆದ್ದಿರುವೆ. ಅದನ್ನು ಮಾಡಬೇಕಾಗಿತ್ತು. ಕಾಂಗ್ರೆಸ್ ಸೇರಿ ಬಿಜೆಪಿಗೆ ದ್ರೋಹ ಬಗೆದಿದ್ದೀರಿ ಎಂದು ಹೇಳಿದರು.
ಮುಂದೆ ಜಮ್ಮು-ಕಾಶ್ಮೀರ 371 ಕಲಂ, ಮತಾಂತರ ಕಾಯ್ದೆ, ಗೋಹತ್ಯೆ ಹಿಂದಕ್ಕೆ ಪಡೆಯಬೇಕು ಎಂದು ಕಾಂಗ್ರೆಸ್ ವಿಧಾನಸಭೆಯಲ್ಲಿ ಹೋರಾಟ ಮಾಡಿದರೆ ನೀವು ಗೆದ್ದು ಬಂದರೆ ಏನು ಮಾಡುತ್ತೀರಿ?. ಇದಕ್ಕೆ ಉತ್ತರ ಹೇಳಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೀಸಲಾತಿ ರದ್ದು ಪಡಿಸುವುದಾಗಿ ಡಿ ಕೆ ಶಿವಕುಮಾರ್ ಅವರು ಹೇಳುತ್ತಿದ್ದಾರೆ. ಅದಕ್ಕೆ ಏನು ಉತ್ತರ ಕೊಡುತ್ತೀರಿ?. ಲಿಂಗಾಯತ ನಾಯಕರಾಗಿ ನಿಮ್ಮ ನಿಲುವು ಏನು ಎನ್ನುವುದನ್ನು ಸ್ಪಷ್ಟಪಡಿಸಿ ಎಂದು ಸವಾಲು ಹಾಕಿದರು.
ಡ್ಯಾಂ ಹೇಳಿಕೆಗೆ ತಿರುಗೇಟು: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಲಿಂಗಾಯತ ಡ್ಯಾಂ ಚುನಾವಣೆಯಲ್ಲಿ ಒಡೆಯುತ್ತದೆ ಎನ್ನುವ ಹೇಳಿಕೆಗೆ ತಿರುಗೇಟು ನೀಡಿದ ಯತ್ನಾಳ್, ಲಿಂಗಾಯತರ ಡ್ಯಾಂ ಎಂದೂ ಒಡೆಯುವುದಿಲ್ಲ. ಅದರ ಒಂದು ಚಿಪ್ಪನ್ನು ಸರಿಸಲು ಸಾಧ್ಯವಿಲ್ಲ. ಮೊದಲು ಲಿಂಗಾಯತರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.