ವಿಜಯಪುರ :ಜಿಲ್ಲೆಯ ನಿಡಗುಂದಿ ತಾಲೂಕಿನ ಲಾಲ್ ಬಹದ್ದೂರ್ ಶಾಸ್ತ್ರಿ (ಆಲಮಟ್ಟಿ) ಜಲಾಶಯ ಸಂಪೂರ್ಣವಾಗಿ ಭರ್ತಿಯಾದ ಹಿನ್ನೆಲೆಯಲ್ಲಿ ಸೆ 2ರಂದು (ನಾಳೆ) ಮುಖ್ಯಮಂತ್ರಿ ಸಿದ್ದರಾಮಯ್ಯ ಕೃಷ್ಣಾಗೆ ಬಾಗಿನ ಅರ್ಪಿಸಲಿದ್ದಾರೆ. ಸಿಎಂ ಆಗಮನದ ಹಿನ್ನೆಲೆಯಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಸೇರಿದಂತೆ ಜಿಲ್ಲೆಯ ಶಾಸಕರು, ಮುಖಂಡರು ಹಾಗೂ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಸಾಮಾನ್ಯವಾಗಿ ಆಗಸ್ಟ್ ತಿಂಗಳಲ್ಲೇ ಜಲಾಶಯ ಭರ್ತಿಯಾಗಿ ಸಂಪ್ರದಾಯದಂತೆ ಸಿಎಂ ಗಂಗಾಪೂಜೆ ನೆರವೇರಿಸಿ ಬಾಗಿನ ಅರ್ಪಿಸುತ್ತಿದ್ದರು. ಆದರೆ ಈ ಬಾರಿ ಮುಂಗಾರು ಮಳೆ ವಿಳಂಬವಾಗಿದೆ. ಗಂಗಾಪೂಜೆ ಹಾಗೂ ಬಾಗಿನ ಅರ್ಪಿಸುವ ಕಾರ್ಯವೂ ತಡವಾಗಿದೆ.
ನಾಳೆ ಬೆಳಗ್ಗೆ ವಿಮಾನದ ಮೂಲಕ ಬಳ್ಳಾರಿಯ ಜಿಂದಾಲ್ಗೆ ಸಿದ್ದರಾಮಯ್ಯ ಆಗಮಿಸಿ ಅಲ್ಲಿಂದ ವಿಶೇಷ ಹೆಲಿಕಾಪ್ಟರ್ ಮೂಲಕ ಆಲಮಟ್ಟಿಯ ಹೆಲಿಪ್ಯಾಡ್ಗೆ ಬರಲಿದ್ದಾರೆ. ಹೆಲಿಪ್ಯಾಡ್ನಿಂದ ರಸ್ತೆ ಮಾರ್ಗವಾಗಿ ಜಲಾಶಯದ ಆವರಣಕ್ಕೆ ಆಗಮಿಸಿ ಗಂಗಾಪೂಜೆ ನೆರವೇರಿಸಿ ಬಾಗಿನ ಅರ್ಪಿಸುವರು. ಬಳಿಕ ರಸ್ತೆ ಮಾರ್ಗವಾಗಿ ಕೆಬಿಜೆಎನ್‌ಎಲ್ ಮುಖ್ಯ ಅಭಿಯಂತರ ಕಚೇರಿಗೆ ತೆರಳಿ ಅಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ 3 ಹಂತ ಕುರಿತ ಭೂಸ್ವಾಧೀನ, ಪುನರ್‌ವಸತಿ ಪುನರ್‌ನಿರ್ಮಾಣ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸುವರು.