ವಿಜಯಪುರ: ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ದೇಶದ ಪ್ರಧಾನ ಮಂತ್ರಿಯಾಗಲಿ ಎಂದು ಸಂಕಲ್ಪ ತೊಟ್ಟು ಇಬ್ಬರು ಯುವಕರು ದೆಹಲಿಗೆ ಪಾದಯಾತ್ರೆ ಕೈಗೊಂಡಿದ್ದಾರೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ಬಿಜೆಪಿ ಕಾರ್ಯಕರ್ತರಾದ ಬಸಪ್ಪ ಸಂತಿ ಹಾಗೂ ಸಂತೋಷ ಹಿರೇಮಠ ಜನವರಿ 8 ರಂದು ಮಧ್ಯಾಹ್ನ ಜಮಖಂಡಿ ಇಂದ ಪಾದಯಾತ್ರೆ ಆರಂಭಿಸಿದ್ದಾರೆ. ಒಟ್ಟು 2,500 ಕಿಲೋ ಮೀಟರ್ ಕ್ರಮಿಸಿ ದೆಹಲಿಗೆ ತೆರಳಿ ಪ್ರಧಾನಿ ಮೋದಿ ಅವರನ್ನು ಭೇಟಿಯಾಗುವ ಗುರಿ ಹೊಂದಿದ್ದಾರೆ. ಜೊತೆಗೆ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲು ಶುಭ ಕೋರಲಿದ್ದಾರೆ. ಅಯೋಧ್ಯೆಗೂ ತೆರಳಿ ಪಿಎಂ ನರೇಂದ್ರ ಮೋದಿ ಅವರ ಧೀರ್ಘಾಯುಷ್ಯಕ್ಕೆ ಪ್ರಾರ್ಥನೆ ಸಲ್ಲಿಸಲಿದ್ದಾರೆ.
2,500 ಕಿಲೋ ಮೀಟರ್ ಪಾದಯಾತ್ರೆ.. ಒಟ್ಟು 2 ತಿಂಗಳೊಳಗೆ 2,500 ಕಿಲೋ ಮೀಟರ್ ಪಾದಯಾತ್ರೆ ನಡೆಸಲಿದ್ದಾರೆ. ನಿತ್ಯ 40-45 ಕಿ.ಮೀ ಪಾದಯಾತ್ರೆ ನಡೆಸಲಿದ್ದಾರೆ. ಬಿಜೆಪಿ ಕಾರ್ಯಕರ್ತರು ಇವರಿಗೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಿಕೊಡಲಿದ್ದಾರೆ. ಬೆಳಗ್ಗಿನ ಉಪಾಹಾರ ವ್ಯವಸ್ಥೆ, ಮಧ್ಯಾಹ್ನದ ಊಟವನ್ನು ಬಿಜೆಪಿ ಕಾರ್ಯಕರ್ತರು ಪೂರೈಸಲಿದ್ದಾರೆ. ಸಂಜೆ 6 ಗಂಟೆಗೆ ಯಾವ ಗ್ರಾಮ ತಲುಪುತ್ತಾರೋ ಅಲ್ಲಿ ಬಿಜೆಪಿ ಕಾರ್ಯಕರ್ತರನ್ನು ಸಂಪರ್ಕಿಸಿ, ಊಟದ ಜೊತೆ ವಾಸ್ತವ್ಯ ಹೂಡಿ ಮತ್ತೆ ಮರುದಿನ ಬೆಳಗ್ಗೆ 6 ಗಂಟೆಗೆ ಪಾದಯಾತ್ರೆ ಆರಂಭಿಸುತ್ತಾರೆ. ಮಂಗಳವಾರದಂದು ಅವರು ವಿಜಯಪುರಕ್ಕೆ ಆಗಮಿಸಿದಾಗ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ ಸ್ವಾಗತಿಸಿ ಉಪಹಾರದ ವ್ಯವಸ್ಥೆ ಮಾಡಿ ನಂತರ ಬೀಳ್ಕೊಟ್ಟರು.
2014ರಲ್ಲಿ ಪಾದಯಾತ್ರೆ..ಈ ಇಬ್ಬರು ಬಿಜೆಪಿ ಕಾರ್ಯಕರ್ತರು 2014ರಲ್ಲಿ ಗುಜರಾತ್ ರಾಜ್ಯದ ಗಾಂಧಿ ನಗರಕ್ಕೆ ಪಾದಯಾತ್ರೆ ಕೈಗೊಂಡು, ಮೋದಿ ಅವರನ್ನು ಭೇಟಿ ಮಾಡಲು ಪ್ರಯತ್ನಿಸಿದ್ದರು. ಆದರೆ ಅದು ಸಾಧ್ಯವಾಗದೇ, ಮೋದಿ ಅವರ ತಾಯಿಯನ್ನು ಭೇಟಿ ಮಾಡಿ ವಾಪಸ್ ಕರ್ನಾಟಕಕ್ಕೆ ಬಂದಿದ್ದರು.
ಇದನ್ನೂ ಓದಿ:ಮೆಟ್ರೋ ಪಿಲ್ಲರ್ ಕುಸಿತ ಪ್ರಕರಣ: ಗುಣಮಟ್ಟದ ಪರೀಕ್ಷೆಗೆ ಐಐಎಸ್ಸಿಗೆ ಮನವಿ