ವಿಜಯಪುರ:ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಜನೌಷಧ ಕೇಂದ್ರಗಳನ್ನು ಸ್ಥಾಪನೆ ಮಾಡುವ ಯೋಜನೆ ಇದೆ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಹೇಳಿದರು.
ನಗರದ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಮಾತನಾಡಿದ ಅವರು, ಈ ಹಿಂದೆ ಯಡಿಯೂರಪ್ಪ ನೇತೃತ್ವದ ಸರ್ಕಾರ ಆಡಳಿತದಲ್ಲಿರುವಾಗ ಆರೋಗ್ಯ ಸಚಿವನಾಗಿದ್ದೆ. ಆಗ 108 ಆ್ಯಂಬ್ಯುಲೆನ್ಸ್ ಸೇವೆಯನ್ನು ಜಾರಿಗೆ ತಂದಿದ್ದೆ. ಈಗ ಮತ್ತೆ ಅದೇ ಖಾತೆಯಲ್ಲಿ ಕಾರ್ಯ ನಿರ್ವಹಿಸಲಿದ್ದೇನೆ. ನಿಮ್ಮೆಲ್ಲರ ಕೆಲಸ ಮಾಡುವುದು ನನ್ನ ಸೌಭಾಗ್ಯ ಎಂದರು.
ಆರೋಗ್ಯ ಸಚಿವ ಬಿ. ಶ್ರೀರಾಮುಲು ಸಮಸ್ಯೆಗಳ ಕುರಿತು ಮಾಹಿತಿ ಪಡೆದರು ಇನ್ನು ಇದೇ ವೇಳೆ, ಆಸ್ಪತ್ರೆಗೆ ಬರುವ ರೋಗಿಗಳನ್ನು ಅಥವಾ ಬಾಣಂತಿಯರನ್ನು ಉಪಚರಿಸಲು ಬರುವ ಅವರ ಸಂಬಂಧಿಕರಿಗೆ ಉಳಿದುಕೊಳ್ಳಲು ಸರಿಯಾದ ವ್ಯವಸ್ಥೆ ಕಲ್ಪಿಸಲು ಶೆಡ್ಗಳನ್ನು ನಿರ್ಮಾಣ ಮಾಡುತ್ತೇವೆ. ಅಷ್ಟೇ ಅಲ್ಲದೆ, ಶೌಚಾಯಲದ ಸಮಸ್ಯೆಯಿರುವ ಕಾರಣ ಟೆಂಡರ್ ವಹಿಸಿಕೊಂಡವರಿಗೆ ಸರಿಯಾದ ನಿರ್ವಹಣೆ ಮಾಡಲು ಪತ್ರ ಬರೆಯಿರಿ. ಇಲ್ಲವೇ ಟೆಂಡರ್ ರದ್ದು ಮಾಡುತ್ತೇನೆ ಎಂದು ಖಡಕ್ ಎಚ್ಚರಿಕೆ ನೀಡಿದರು.
ಇನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಬಾಣಂತಿಯರಿಗೆ ನೋಟೊ ಔಷಧವನ್ನು ನೀಡಲು ಆದೇಶಿಸಲಾಗುವುದು. ಅಷ್ಟೇ ಅಲ್ಲದೆ, ಬಾಣಂತಿಯರಿಂದ ಯಾರಾದರೂ ಹಣ ವಸೂಲಿ ಮಾಡಿದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಜಿಲ್ಲಾಸ್ಪತ್ರೆಯ ನೆಲದ ಮೇಲೆ ಕುಳಿತು ಜನರ ಸಮಸ್ಯೆಗಳನ್ನು ಆಲಿಸಿದ ಸಚಿವರ ಸರಳತೆಗೆ ಮೆಚ್ಚುಗೆ ವ್ಯಕ್ತವಾಯಿತು.