ವಿಜಯಪುರ : ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪೆನ್ಡ್ರೈವ್ ಬಿಡುಗಡೆ ಮಾಡುವ ಹೆದರಿಕೆ ಹಾಕುತ್ತಿದ್ದಾರೆ. ಪೆನ್ ಡ್ರೈವ್ ಒಳಗೆ ಸತ್ಯವಾದದ್ದು ಇದ್ದರೆ ತನಿಖೆ ಮಾಡಬೇಕಾಗುತ್ತೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ತಿಳಿಸಿದರು. ಜಿಲ್ಲೆಯ ಬಬಲೇಶ್ವರ ಚಾಲವೆ ಶೇಗುಣಸಿ ಬಳಿ ಮುಳವಾಡ ಏತನೀರಾವರಿ 3ನೇ ಹಂತದ ಕಾಮಗಾರಿ ನಿರ್ಮಾಣಕ್ಕೆ ಚಾಲನೆ ನೀಡಿ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಪೆನ್ಡ್ರೈವ್ನಲ್ಲಿರುವ ಸತ್ಯಾಸತ್ಯತೆ ತಿಳಿದುಕೊಳ್ಳಬೇಕಾಗುತ್ತೆ. ವೈಸ್ ಡಿಟೆಕ್ಷನ್ ಸರಿಯಾಗಿದೆಯಾ? ಅನ್ನೋದನ್ನು ಕೇಳ್ಬೇಕಾಗುತ್ತೆ. ಈಗೆಲ್ಲ ಮಿಮಿಕ್ರಿ ಬೇರೆ ಮಾಡ್ತಾರೆ. ಯಾರು ಮಾತನಾಡಿದ್ದಾರೆ. ಯಾವ ಸಂದರ್ಭದಲ್ಲಿ ಮಾತನಾಡಿದ್ದಾರೆ, ಎಲ್ಲವು ಕೂಡಾ ತನಿಖೆಯಾಗಬೇಕಾಗುತ್ತೆ ಎಂದರು. ಹೆಚ್ಡಿಕೆ ಪೆನ್ಡ್ರೈವ್ ಬಿಡುಗಡೆ ಮಾಡಿದಾಗ ಅದಕ್ಕೆ ಸರ್ಕಾರ ಉತ್ತರ ಕೊಡುತ್ತದೆ ಎಂದು ಹೇಳಿದರು.
ಇದೇ ವೇಳೆ ಮಠ ಮಾನ್ಯಗಳಿಗೆ ಅನುದಾನ ಕಡಿತ ಕುರಿತು ಮಾಜಿ ಸಚಿವ ಸಿ ಸಿ ಪಾಟೀಲ್ ಮಾಡಿದ ಆರೋಪಕ್ಕೆ ತಿರುಗೇಟು ನೀಡಿದ ಎಂಬಿಪಿ, ನಮಗೆ ಮಠ-ಮಾನ್ಯಗಳ ಬಗ್ಗೆ ಅಪಾರ ಗೌರವ ಇದೆ. ಈ ವರ್ಷ ನಾವು ಗ್ಯಾರಂಟಿಗಳನ್ನು ಜಾರಿಗೆ ತರುತ್ತಿದ್ದೇವೆ. ಹೀಗಾಗಿ, ಮುಂದಿನ ದಿನಗಳಲ್ಲಿ ಎಲ್ಲ ಮಠ ಮಾನ್ಯಗಳಿಗೆ ಅನುದಾನ ನೀಡುತ್ತೇವೆ ಎಂದು ಭರವಸೆ ನೀಡಿದರು. ಸಿ. ಸಿ ಪಾಟೀಲ್ ಅವರು ಸ್ವಲ್ಪ ತಾಳ್ಮೆಯಿಂದ ಇರಲಿ, ಅವರದ್ದೇನಾದರೂ ಮಠವಿದೆಯಾ? ಹೇಳಲಿ ಎಂದು ತಿರುಗೇಟು ನೀಡಿದರು.
ನಾವು ಬೇದ-ಭಾವ ಮಾಡಲ್ಲ. ಎಲ್ಲರಿಗೂ ಅನುದಾನ ಕೊಡುತ್ತೇವೆ. ಹಿಂದೂ ಮಠಗಳು, ಕ್ರಿಶ್ಚಿಯನ್ ಚರ್ಚ್ಗಳಿಗೆ, ಮುಸ್ಲಿಂ ಮಸೀದಿ, ಜೈನರ ಬಸದಿ, ಬೌದ್ಧ ವಿಹಾರಗಳನ್ನ ಸಮಾನವಾಗಿ ಕಾಣ್ತೇವೆ. ಎಲ್ಲರಿಗೂ ಹಣಕಾಸಿನ ಅನುದಾನ ಕೊಡುತ್ತೇವೆ ಎಂದರು.