ಮುದ್ದೇಬಿಹಾಳ: 16 ವರ್ಷದ ಅಪ್ರಾಪ್ತ ಅಂಗವಿಕಲ ಬಾಲಕಿಯ ಮೇಲೆ 52 ವರ್ಷದ ವ್ಯಕ್ತಿಯೊಬ್ಬ ಅತ್ಯಾಚಾರಕ್ಕೆ ಯತ್ನಿಸಿ ಸಿಕ್ಕಿ ಬಿದ್ದಿರುವ ಘಟನೆ ತಾಳಿಕೋಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಅತ್ಯಾಚಾರಕ್ಕೆ ಯತ್ನಿಸಿರುವ ಆರೋಪಿ ರುದ್ರಗೌಡ ಬಿರಾದಾರ ಗ್ರಾಮಸ್ಥರ ಕೈಗೆ ಸಿಕ್ಕಿದ್ದು, ಪೊಲೀಸರಿಗೆ ಒಪ್ಪಿಸಿದ್ದಾರೆ. ಪೋಕ್ಸೋ ಕಾಯ್ದೆ ಅಡಿ ತಾಳಿಕೋಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಳಿಕೋಟಿ ತಾಲೂಕು ನಡಹಳ್ಳಿ ಗ್ರಾಮದಲ್ಲಿ ಬಾಲಕಿ ಮೇಲೆ ರುದ್ರಗೌಡ ಅತ್ಯಾಚಾರ ನಡೆಸಲು ಯತ್ನಿಸಿದ್ದಾನೆ. ಬಾಲಕಿ ಕಿರುಚಿಕೊಂಡಾಗ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದು, ತಾಳಿಕೋಟೆ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.
ಆದರೆ, ಹೆಚ್ಚುವರಿ ಪಿಎಸ್ಐ ಗಂಗೂಬಾಯಿ ಬಿರಾದಾರ ಪ್ರಕರಣ ದಾಖಲಿಸಿಕೊಳ್ಳದೇ ರಾಜಿ ಸಂಧಾನ ಮಾಡಿ ಪ್ರಕರಣ ಮುಚ್ಚಿಹಾಕಲು ಯತ್ನಿಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ದೂರು ದಾಖಲಾಗದೇ ಇರುವಾಗ ತಾಲೂಕಿನ ವಿಕಲಚೇತನರು ಪ್ರತಿಭಟಿಸಿ, ದೂರು ದಾಖಲಾಗುವಂತೆ ಮಾಡಿದ್ದಾರೆ.