ಮುದ್ದೇಬಿಹಾಳ:ಕೊರೊನಾ ವೈರಸ್ ತಡೆಗಟ್ಟಲು ಹೋರಾಡುತ್ತಿರುವ ಆಶಾ ಕಾರ್ಯಕತರ್ಯೆಯರು, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ವೈದ್ಯರ ಮೇಲೆ ತಮ್ಮ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಯಾರಾದರೂ ದೌರ್ಜನ್ಯ ನಡೆಸಿದ್ರೆ, ಅವರ ಕೈಕಾಲು ಮುರಿದು ಜೈಲಿಗೆ ಹಾಕುವಂತೆ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಅವರು ಪೊಲೀಸರಿಗೆ ಖಡಕ್ ಸೂಚನೆ ನೀಡಿದ್ದಾರೆ.
ಕೊರೊನಾ ವಾರಿಯರ್ಸ್ ಮೇಲೆ ದೌರ್ಜನ್ಯ ನಡೆಸುವವರನ್ನು ಕೈಕಾಲು ಮುರಿದು ಜೈಲಿಗೆ ತಳ್ಳಿ ಎಂದ ಶಾಸಕ - muddebihala latest news
ಆರೋಗ್ಯ ಇಲಾಖೆಯವರು ಚಿಕಿತ್ಸೆಗೆಂದು ಭೇಟಿ ನೀಡಿದಾಗ ಸೋಂಕಿತರು ಅಥವಾ ಶಂಕಿತರು ಸರಿಯಾದ ಮಾಹಿತಿ ನೀಡಬೇಕು. ಒಂದು ವೇಳೆ ಉದ್ಧಟತನ ಮೆರೆದ್ರೆ ಅಂತಹವರನ್ನು ಕೈಕಾಲು ಮುರಿದು ಜೈಲಿಗೆ ಹಾಕಿ ಎಂದು ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಪೊಲೀಸರಿಗೆ ಹೇಳಿದ್ದಾರೆ.
ಪಟ್ಟಣದ ಆರೋಗ್ಯ ಇಲಾಖೆಯ ಕಚೇರಿಯ ಆವರಣದಲ್ಲಿ ಆಶಾ, ಆರೋಗ್ಯ ಕಾರ್ಯಕರ್ತರು, 108 ಆಂಬ್ಯುಲೆನ್ಸ್ ಚಾಲಕರಿಗೆ ದಿನಸಿ ಕಿಟ್ ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಆಶಾ, ಆರೋಗ್ಯ ಕಾರ್ಯಕರ್ತರು ಕ್ವಾರಂಟೈನ್‌ಲ್ಲಿರುವವರ ಆರೋಗ್ಯ ವಿಚಾರಿಸಲು ಬಂದಾಗ ಸೌಜನ್ಯದಿಂದ ನಡೆದುಕೊಳ್ಳಬೇಕು. ಅವರು ಕೇಳುವ ಮಾಹಿತಿಯನ್ನು ಸರಿಯಾಗಿ ನೀಡಬೇಕು ಎಂದರು.
ಕೊರೊನಾ ವಾರಿಯರ್ಸ್ ಜೊತೆ ಅತಿರೇಕದಿಂದ ನಡೆದುಕೊಂಡದ್ದೇ ಆದಲ್ಲಿ ಕಠಿಣ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಈ ವೇಳೆ ಶಾಸಕರ ಪತ್ನಿ ಮಹಾದೇವಿ ಪಾಟೀಲ ನಡಹಳ್ಳಿ, ಸಿಪಿಐ ಆನಂದ ವಾಗ್ಮೋಡೆ, ಡಾ.ಸತೀಶ ತಿವಾರಿ, ಆಶಾ ಕಾರ್ಯಕರ್ತರು, ಆರೋಗ್ಯ ಸಿಬ್ಬಂದಿ, 108 ಆಂಬ್ಯುಲೆನ್ಸ್ ವಾಹನಗಳ ಚಾಲಕರು ಉಪಸ್ಥಿತರಿದ್ದರು.