ಮುದ್ದೇಬಿಹಾಳ: ಹೊಸದಾಗಿ ಮದುವೆ ನಿಶ್ಚಿತಾರ್ಥವಾದ ಬಳಿಕ ವರನ ಮನೆಯವರು ವಧುವಿನ ಮನೆಯವರೆಗೆ ತೆರಳಿ ಸಕ್ಕರೆ ಆರತಿ ಬೊಂಬೆ ಕೊಡುವ ಸಂಪ್ರದಾಯ ಅನಾದಿ ಕಾಲದಿಂದಲೂ ಬೆಳೆದುಕೊಂಡು ಬಂದಿದೆ.
ಗ್ರಾಮೀಣ ಪ್ರದೇಶದಲ್ಲಿ ಈ ಆಚರಣೆಗೆ ತನ್ನದೇ ಆದ ಮಹತ್ವ ಇದ್ದು, ಇಂದಿಗೂ ಹಳ್ಳಿಯ ಜನರು ಈ ಸಂಪ್ರದಾಯ ಪಾಲಿಸುತ್ತಿದ್ದಾರೆ. ಆದರೆ ಪಟ್ಟಣ, ದೊಡ್ಡ ದೊಡ್ಡ ನಗರಗಳಲ್ಲಿ ಈ ಸಂಪ್ರದಾಯ ಮರೆಯಾಗುತ್ತಾ ಸಾಗಿರುವುದು ಈ ಉದ್ಯಮದಾರರಿಗೆ ಸಂಕಷ್ಟವನ್ನುಂಟು ಮಾಡಿದೆ. ಗೌರಿ ಹುಣ್ಣಿಮೆ, ಸೀಗಿ ಹುಣ್ಣಿಮೆ ದಿನದಂದು ವಿಶೇಷವಾಗಿ ವರನ ಮನೆಯವರು ಸಕ್ಕರೆ ಬೊಂಬೆಯ ಆರತಿಗಳನ್ನು ತೆಗೆದುಕೊಂಡು ಹೋಗಿ ಕೊಡುತ್ತಾರೆ.
ಮರೆಯಾಗುತ್ತಿರುವ ಸಂಪ್ರದಾಯ: ಆತ್ಮನಿರ್ಭರ ಭಾರತ ಯೋಜನೆ ಅಡಿ ಸಕ್ಕರೆ ಬೊಂಬೆ ಉದ್ಯಮಕ್ಕೂ ಬೇಕು ಆದ್ಯತೆ ಮುದ್ದೇಬಿಹಾಳ ತಾಲೂಕಿನ ಕೋಳೂರು ಗ್ರಾಮದ ಶಾಂತಪ್ಪ ನಾಗರಾಳ, ಬಸವರಾಜ ನಾಗರಾಳ ಅವರು ಸಕ್ಕರೆ ಬೊಂಬೆಯ ಉದ್ದಿಮೆಯನ್ನು ಕಳೆದ 25 ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ಸದ್ಯಕ್ಕೆ ವ್ಯಾಪಾರ ಕಡಿಮೆ ಆಗಿದೆ. ಕೊರೊನಾ ಹಾವಳಿಯ ಮಧ್ಯೆ ನಷ್ಟವಾಗುತ್ತಿದೆ ಎಂದು ಉದ್ದಿಮೆದಾರರು ಅಳಲು ತೋಡಿಕೊಂಡಿದ್ದಾರೆ.
ಕಾರ್ಮಿಕ ಮಹೇಶ ಬಿರಾದಾರ ಮಾತನಾಡಿ, ಪ್ರತಿ ದಿನ 2.50 ಕ್ವಿಂಟಾಲ್ ಸಕ್ಕರೆಯ ಬೊಂಬೆ ಮಾರಾಟ ಮಾಡಲಾಗುತ್ತಿದ್ದು, 80 ರೂ.ಗಳಂತೆ ಕೆಜಿಯೊಂದಕ್ಕೆ ಮಾರುತ್ತಿದ್ದೇವೆ. ಕೂಲಿ ಕಾರ್ಮಿಕರಿಗೆ 600-1200 ರೂ.ಗಳವರೆಗೆ ಕೂಲಿ ಕೊಡುತ್ತಾರೆ. ಇಲ್ಲಿ ತಯಾರಾದ ಸಕ್ಕರೆ ಬೊಂಬೆಯನ್ನು ನಿಡಗುಂದಿ, ಮುದ್ದೇಬಿಹಾಳ, ಬ.ಬಾಗೇವಾಡಿ, ತಾಳಿಕೋಟಿ ಕಡೆಗಳಲ್ಲಿ ಮಾರಾಟಕ್ಕೆ ಕಳಿಸುತ್ತೇವೆ ಎಂದು ಹೇಳಿದರು.
ಯುವ ಮುಖಂಡ ಉದಯ ರಾಯಚೂರ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಆತ್ಮನಿರ್ಭರ ಭಾರತ ಯೋಜನೆಯಡಿ ಮೇಡ್ ಇನ್ ಇಂಡಿಯಾ, ಮೇಕ್ ಇನ್ ಇಂಡಿಯಾ ಎಂದು ಸಣ್ಣ ಸಣ್ಣ ಉದ್ದಿಮೆಗಳಿಗೆ ಜೀವ ತುಂಬುವ ಕೆಲಸ ಮಾಡುತ್ತಿದ್ದಾರೆ. ಅಂತಹ ಉದ್ದಿಮೆಗಳಲ್ಲಿ ಸಕ್ಕರೆ ಬೊಂಬೆಯ ಉದ್ದಿಮೆಯನ್ನೂ ಸೇರಿಸಿದರೆ ಇದಕ್ಕೆ ದೇಶೀಯ ಮಾರುಕಟ್ಟೆ ದೊರೆತು ಕೂಲಿಕಾರ್ಮಿಕರು, ಇದನ್ನೇ ನಂಬಿಕೊಂಡು ಜೀವನ ಸಾಗಿಸುವವರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.