ವಿಜಯಪುರ :ಇತ್ತೀಚಿಗೆ ನಿಧನರಾದ ಮಾಜಿ ಸಚಿವ ಎಂ.ಸಿ.ಮನಗೂಳಿ ಅವರ ಪುತ್ರ ಅಶೋಕ ಮನಗೂಳಿ ಉಪಚುನಾವಣೆ ಘೋಷಣೆ ಆಗುವ ಮುನ್ನವೇ ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಲು ನಿರ್ಧರಿಸಿದ್ದಾರೆ.
ಈ ಕುರಿತು ಸಿಂದಗಿಯಲ್ಲಿ ಮಾತನಾಡಿದ ಅವರು, ನಾಳೆ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸತ್ವ ಪಡೆದು ಕೊಳ್ಳುವುದಾಗಿ ತಿಳಿಸಿದರು.
ಇದನ್ನೂ ಓದಿ : ಬ್ರಹ್ಮ ಬಂದಿದ್ರೂ ಇಂಥ ಬಜೆಟ್ ಮಂಡನೆ ಮಾಡಲಾಗುತ್ತಿರಲಿಲ್ಲ: ಆರ್. ಅಶೋಕ್
ಇನ್ನು 15 ದಿನದಲ್ಲಿ ಸಿಂದಗಿಯಲ್ಲಿ ಬೃಹತ್ ಸಮಾವೇಶ ನಡೆಸಿ, ನಮ್ಮ ತಂದೆಯವರ ಬೆಂಬಲಿಗರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳುವುದಾಗಿ ಅಶೋಕ್ ಮನಗೂಳಿ ತಿಳಿಸಿದರು. ಕಾಂಗ್ರೆಸ್ ಸೇರ್ಪಡೆಗೆ ಸ್ಥಳೀಯ ಕಾಂಗ್ರೆಸ್ ಮುಖಂಡರು ವಿರೋಧ ವ್ಯಕ್ತಪಡಿಸಿದ್ದರ ಕುರಿತು ಪ್ರತಿಕ್ರಿಯಿಸಿದ ಅವರು, ಆ ರೀತಿ ಯಾವುದೇ ವಿರೋಧ ಬಂದಿಲ್ಲ. ನಾನು ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆದ ಮೇಲೆ ಸಿಂದಗಿ ಉಪಚುನಾವಣೆಗೆ ಪಕ್ಷದಿಂದ ಸ್ಪರ್ಧಿಸುವ ಕುರಿತು ಚರ್ಚೆ ನಡೆಸುತ್ತೇನೆ. ಅವರು ಬೇರೆ ಯಾರಿಗಾದರೂ ನೀಡಿದರೂ ಅವರ ಪರ ಚುನಾವಣೆಯಲ್ಲಿ ಪ್ರಚಾರ ನಡೆಸುವುದಾಗಿ ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಶೋಕ್ ಮನಗೂಳಿ ಜೆಡಿಎಸ್ ಗೊಂದಲ:ಸಿಂದಗಿ ಉಪಚುನಾವಣೆಯಲ್ಲಿ ಜೆಡಿಎಸ್ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲ ಎಂದು ಈ ಹಿಂದೆ ಒಂದು ಸಲ ಜೆಡಿಎಸ್ ಹೇಳಿತ್ತು. ಬಳಿಕ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿ ಹೇಳುವ ಮೂಲಕ ಮತದಾರರಲ್ಲಿ ಗೊಂದಲ ಮೂಡಿಸಿತ್ತು. ಇದು ಕಾಂಗ್ರೆಸ್ಗೆ ಲಾಭವಾದಂತಾಗಿದೆ.
ಅಶೋಕ್ ಕಾಂಗ್ರೆಸ್ ಅಭ್ಯರ್ಥಿ?: ಇನ್ನು ಕೆಲವೇ ದಿನಗಳಲ್ಲಿ ರಾಜ್ಯ ಚುನಾವಣಾ ಆಯೋಗ ಮೂರು ವಿಧಾನಸಭೆ ಹಾಗೂ ಒಂದು ಲೋಕಸಭೆ ಉಪಚುನಾವಣೆಗೆ ದಿನಾಂಕ ಪ್ರಕಟಿಸಲಿದೆ. ಸಿಂದಗಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಅಶೋಕ್ ಮನಗೂಳಿ ಕಣಕ್ಕೆ ಇಳಿಯುವುದು ಬಹುತೇಕ ಖಚಿತವಾಗಿದೆ. ಆಡಳಿತಾರೂಢ ಬಿಜೆಪಿ ಸಿಂದಗಿಯಲ್ಲಿ ಪ್ರಬಲ ಅಭ್ಯರ್ಥಿ ನಿಲ್ಲಿಸಲು ಶತ ಪ್ರಯತ್ನ ನಡೆಸುತ್ತಿದೆ. ಡಿಸಿಎಂ ಲಕ್ಷಣ ಸವದಿ ಇಲ್ಲವೇ, ಅವರ ಪುತ್ರನ ಹೆಸರು ಮೊದಲು ಚಾಲ್ತಿಯಲ್ಲಿತ್ತು. ಆದರೆ, ತಾವಾಗಲಿ, ತಮ್ಮ ಪುತ್ರನಾಗಲಿ ಸ್ಪರ್ಧಿಸುವುದಿಲ್ಲ ಎಂದು ಸವದಿ ಹೇಳುವ ಮೂಲಕ ವದಂತಿಗೆ ತೆರೆ ಎಳೆದಿದ್ದಾರೆ. ಸಿಂದಗಿ ಉಪಚುನಾವಣೆ ಬಹುತೇಕ ಕಾಂಗ್ರೆಸ್- ಬಿಜೆಪಿ ನಡುವೆ ನೇರ ಸ್ಪರ್ಧಿಯಾಗಿರುವ ಕಾರಣ, ಸಮರ್ಥ ಅಭ್ಯರ್ಥಿ ಹುಡುಕಾಟದಲ್ಲಿ ಬಿಜೆಪಿ ಇದೆ. ಇಲ್ಲವಾದರೆ ಕಳೆದ ಬಾರಿಯ ಪರಾಜಿತ ಅಭ್ಯರ್ಥಿ ರಮೇಶ ಭೂಸನೂರ ಅವರೇ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದರೆ ಅಚ್ಚರಿ ಪಡಬೇಕಿಲ್ಲ.