ಮುದ್ದೇಬಿಹಾಳ(ವಿಜಯಪುರ): ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ ಕೊರೊನಾ ವಾರಿಯರ್ಸ್ಗಳಾಗಿ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಹಿರೇಮಠದ ಚೆನ್ನವೀರ ದೇವರ ಸ್ವಾಮೀಜಿಗಳು, ಗ್ರಾಮಸ್ಥರು ಪುಷ್ಪವೃಷ್ಟಿಗೈಯ್ದು ಅಭಿನಂದಿಸಿದ್ದಾರೆ.
ತಾಲ್ಲೂಕಿನಲ್ಲಿ ಭಾನುವಾರ ಕುಂಟೋಜಿ ಹಿರೇಮಠದ ಚೆನ್ನವೀರ ದೇವರ ನೇತೃತ್ವದಲ್ಲಿ ಮಠದ ವತಿಯಿಂದ ಹಮ್ಮಿಕೊಂಡಿದ್ದ ಕೊರೊನಾ ವಾರಿಯರ್ಸ್ಗಳ ಅಭಿನಂದನಾ ಸಮಾರಂಭದಲ್ಲಿ ಕುಂಟೋಜಿ ಗ್ರಾಮದ ಆಶಾ ಕಾರ್ಯಕರ್ತೆಯರ ಸೇವೆಯನ್ನು ಸ್ಮರಿಸಲಾಯಿತು.
ಈ ವೇಳೆ ಮಾತನಾಡಿದ ಕುಂಟೋಜಿ ಚೆನ್ನವೀರ ದೇವರು, ಕೊರೊನಾ ವೈರಸ್‌ನಂತ ಅಪಾಯಕಾರಿ ಶತ್ರುವಿನ ವಿರುದ್ಧ ತಮ್ಮ ಕುಟುಂಬದ ಹಿತವನ್ನೂ ಲೆಕ್ಕಸದೇ ಜನರ ಸೇವೆಗೆ ಮುಂದಾಗಿರುವ ಎಲ್ಲಾ ಕೊರೊನಾ ವಾರಿಯರ್ಸ್ಗಳನ್ನು ಸಮಾಜ ನಿರಂತರವಾಗಿ ನೆನೆಯಬೇಕು ಎಂದರು.
ಇನ್ನು ಮಹಾರಾಷ್ಟ್ರಕ್ಕೆ ವಲಸೆ ಹೋಗಿದ್ದ ಕಾರ್ಮಿಕರನ್ನು ವಾಪಸ್ ಕರೆತಂದ ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಬಡವರಿಗೆ ದಿನಸಿ ಕಿಟ್ ವಿತರಿಸಿದ ಕರ್ನಾಟಕ ಅರ್ಬನ್ ಬ್ಯಾಂಕ್ ಅಧ್ಯಕ್ಷ ಸತೀಶ ಓಸ್ವಾಲ, ಆಶಾ ಕಾರ್ಯಕರ್ತೆಯರಾದ ಶಾರದಾ ಹಿರೇಮಠ, ಯಲ್ಲಮ್ಮ ಹೊಸಮನಿ, ಮಲ್ಲಮ್ಮ ತಳವಾರ, ರೇಣುಕಾ ತಾಂಬ್ರೊಳ್ಳಿ ಅವರನ್ನು ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಇಟಗಿ ಗುರುಶಾಂತವೀರ ದೇವರು, ಮುಖಂಡರಾದ ಎಸ್.ಎಂ.ಪಾಟೀಲ, ಕೆ.ಜಿ.ಬಿರಾದಾರ, ಮಹಾಂತೇಶ ಬೂದಿಹಾಳಮಠ, ಉಸ್ಮಾನ ಇನಾಮದಾರ, ಪ್ರಕಾಶ ಹೂಗಾರ, ಸುರೇಶ ಹೂಗಾರ ಮತ್ತಿತರರು ಉಪಸ್ಥಿತರಿದ್ದರು.