ವಿಜಯಪುರ: ಆಶಾ ಕಾರ್ಯಕರ್ತೆಯರ ಮೇಲಿನ ಹಲ್ಲೆ ಖಂಡಿಸಿ ಸೂಕ್ತ ರಕ್ಷಣೆ ಒದಗಿಸುವಂತೆ ಹಾಗೂ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ಆಗ್ರಹಿಸಿ ಮೇ 29ರಂದು ಆಶಾ ಸಂರಕ್ಷಣಾ ದಿನ ಎಂದು ಘೋಷಿಸಿ ರಾಜ್ಯಾದ್ಯಂತ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ(ಎಐಯುಟಿಯುಸಿ)ದಿಂದ ಹೋರಾಟ ನಡೆಸಲಾಗುವುದು ಎಂದು ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಹೆಚ್.ಟಿ.ಹೇಳಿದರು.
ಮೇ 29ರಂದು ಆಶಾ ಸಂರಕ್ಷಣಾ ದಿನವೆಂದು ಘೋಷಿಸಿ ರಾಜ್ಯವ್ಯಾಪಿ ಹೋರಾಟ ನಗರದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕೊರೊನಾ ವೈರಸ್ ಭೀತಿ ಆರಂಭವಾದಾಗಿನಿಂದ ಆಶಾ ಕಾರ್ಯಕರ್ತೆಯರು ಫ್ರಂಟ್ ಲೈನ್ ವಾರಿಯರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜೀವ ಭಯದ ನಡುವೆಯೂ ಕಾರ್ಯಕರ್ತೆಯರು ಮನೆ ಮನೆಗಳಿಗೆ ತೆರಳಿ ಸರ್ವೇ, ಸೋಂಕಿತರ ಬಗ್ಗೆ ಮಾಹಿತಿ ಪಡೆಯುವ ಕೆಲಸ ಮಾಡುತ್ತಿದ್ದಾರೆ. ಈ ವೇಳೆ ಕೆಲ ಪುಂಡರು ಹಾಗೂ ಪಾನಮತ್ತರು ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ಮಾಡುತ್ತಿದ್ದಾರೆ.
ರಾಜ್ಯದಲ್ಲಿ ಕೋವಿಡ್-19 ಕರ್ತವ್ಯದಲ್ಲಿದ್ದ ಇಬ್ಬರು ಆಶಾ ಕಾರ್ಯಕರ್ತೆಯರು ಈಗಾಗಲೇ ಪ್ರಾಣ ಕಳೆದುಕೊಂಡಿದ್ದಾರೆ. ಅವರಿಗೆ ಸೂಕ್ತ ರಕ್ಷಣೆ ಇಲ್ಲದಂತಾಗಿದೆ. ಸರ್ಕಾರ ನೀಡುವ ಗೌರವಧನ ಕುಟುಂಬ ನಿರ್ವಹಣೆಗೂ ಸಾಲುತ್ತಿಲ್ಲ. ಸರ್ಕಾರ ಮದ್ಯ ಮಾರಟ ಮೂಲ ಆದಾಯವೆಂದು ನಂಬಿ ಮದ್ಯ ಮಾರಾಟಕ್ಕೆ ಅನುಮತಿ ನೀಡಿದೆ. ಆದ್ರೆ ಪಾನಮತ್ತರಾದ ವ್ಯಕ್ತಿಗಳು ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ಹಾಗೂ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುತ್ತಿರೋದು ತೀವ್ರ ನೋವುಂಟು ಮಾಡುತ್ತಿದೆ.
ಸಾವಿಗೇಡಾದ ಕಾರ್ಯಕರ್ತೆಯರಿಗೆ ವಿಮೆ ನೀಡುವುದರ ಬಗ್ಗೆ ಸರ್ಕಾರ ಖಚಿತಪಡಿಸಬೇಕು. ಸರ್ಕಾರ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 10 ಸಾವಿರ ರೂ. ವಿಶೇಷ ಪ್ಯಾಕೇಜ್ ನೀಡಬೇಕು. ಆರೋಗ್ಯ ರಕ್ಷಣೆ ಹಾಗೂ ಸಾವಿಗೀಡಾದ ಕಾರ್ಯಕರ್ತೆಯರ ಕುಟುಂಬಕ್ಕೆ ಸರ್ಕಾರ 50 ಲಕ್ಷ ವಿಮೆ ನೀಡಬೇಕು. ಇಲ್ಲವಾದಲ್ಲಿ ಮೇ 29ರಂದು ಆಶಾ ಸಂರಕ್ಷಣಾ ದಿನ ಎಂದು ಘೋಷಣೆ ಮಾಡಿ ರಾಜ್ಯವ್ಯಾಪಿ ಹೋರಾಟ ನಡೆಸಲಾಗುವುದು ಎಂದು ಹೇಳಿದರು.