ಮುದ್ದೇಬಿಹಾಳ: ವಿವಿಧ ಬೇಡಿಕೆಗಳನ್ನು ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ತಹಶೀಲ್ದಾರ್ಗೆ ಮನವಿ ಪತ್ರ ಸಲ್ಲಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆಶಾ ಕಾರ್ಯಕರ್ತೆಯರ ಸಂಘದ ತಾಲೂಕಾಧ್ಯಕ್ಷೆ ಸುಮಂಗಲಾ ಪಡಸಾಲಿ, ತಮ್ಮ ಕುಟುಂಬಗಳ ಸುರಕ್ಷತೆಯನ್ನು ಬದಿಗಿಟ್ಟು ಕೋವಿಡ್-19 ವಿರುದ್ಧ ಹೋರಾಡುತ್ತಿರುವ ಆಶಾ ಕಾರ್ಯಕರ್ತೆಯರ ಸಂಬಳ ಹೆಚ್ಚಿಸದ ಸರಕಾರಕ್ಕೆ ಮಾನ, ಮರ್ಯಾದೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಶಾ ಕಾರ್ಯಕರ್ತೆಯರ ಸಂಘದ ತಾಲೂಕಾಧ್ಯಕ್ಷೆ ಸುಮಂಗಲಾ ಪಡಸಾಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ಆಶಾ ಕಾರ್ಯಕರ್ತೆಯರ ಗೋಳಾಟಕ್ಕೆ ಯಾವುದೇ ಸ್ಪಂದನೆ ನೀಡದಿರುವುದು ಖಂಡನೀಯ. ಆಶಾ ಕಾರ್ಯಕರ್ತೆಯರಿಗೆ ಮಾಸ್ಕ್, ಸ್ಯಾನಿಟೈಸರ್ ಕೊಟ್ಟಿಲ್ಲ. ನಾವು ನಮ್ಮ ಗಂಡಂದಿರು, ಮಕ್ಕಳನ್ನು ಬಿಟ್ಟು ಕೆಲಸ ಮಾಡುತ್ತಿದ್ದರೂ ನಮ್ಮ ಬಗ್ಗೆ ಗಮನ ಹರಿಸುತ್ತಿಲ್ಲ ಎಂದರು.
ದಮಯಂತಿ ಕುಲಕರ್ಣಿ ಮಾತನಾಡಿ, 12 ವರ್ಷಗಳಿಂದ ವೇತನ ಹೆಚ್ಚಿಸುತ್ತಿಲ್ಲ. ಧರಣಿ ಮಾಡಿದಾಗೊಮ್ಮೆ 500 ರೂ. ಹೆಚ್ಚಿಸುತ್ತಿದ್ದಾರೆ. ಕೊರೊನಾ ಎಂದು ಹಗಲು ರಾತ್ರಿ ದುಡಿದರೂ ಕೇವಲ 4 ಸಾವಿರ ರೂ. ಸಂಬಳ ಬರುತ್ತೆ, ಇದರಲ್ಲಿ ಹೇಗೆ ಜೀವನ ನಡೆಸಬೇಕು. ಮನೆಯಲ್ಲಿ ನೆಮ್ಮದಿ ಇಲ್ಲದಂತಾಗಿದೆ. ಬೇರೆ ಆಶಾಗಳನ್ನು ನೇಮಕ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಊರಿನೊಳಗೆ ಬೇರೆ ಆಶಾಗಳು ಬಂದರೆ ಹೋರಾಟ ಮಾಡುತ್ತೇವೆ ಎಂದು ಕಿಡಿಕಾರಿದರು.