ವಿಜಯಪುರ:ಜಿಲ್ಲೆಯ ಶಾಸ್ತ್ರಿನಗರದಲ್ಲಿ ಒಂಟಿಯಾಗಿ ಜೀವಿಸುತ್ತಿದ್ದ ವೃದ್ಧ ಮಹಿಳೆಯನ್ನು ಕೊಲೆಗೈದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಾದ ಕೇದಾರಿ (ಜ್ಯೋತಿಬಾ), ಪೋಳ (37) ಎಂಬುವರು ಕೊಲೆ ಮಾಡಿ ಬಂಗಾರದ ಆಭರಣಗಳನ್ನು ದೋಚಿಕೊಂಡು ಪರಾರಿಯಾಗಿದ್ದರು. ಪೊಲೀಸರು ತನಿಖೆ ಕೈಗೊಂಡಾಗ ಮೃತ ರೇಖಾ ಮನೆಯಲ್ಲಿ ಇವರು ಬಾಡಿಗೆದಾರರಾಗಿದ್ದರು ಎಂದು ತಿಳಿದು ಬಂದಿದೆ.
ಅಕ್ಟೋಬರ್ 12 ರಂದು ರೇಖಾ ದೇಶಮಾನೆ ಎಂಬುವರನ್ನು ಆಕೆಯ ಸೀರೆಯಿಂದ ಕುತ್ತಿಗೆಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಲಾಗಿತ್ತು. ಆರೋಪಿ ಶೋಧಕ್ಕಾಗಿ ಹೆಚ್ಚುವರಿ ಎಸ್ಪಿ ಬಿ.ಎಸ್. ನ್ಯಾಮಗೌಡ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿತ್ತು. ಬಳಿಕ ನವೆಂಬರ್ 4 ರಂದು ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪೂರದಲ್ಲಿ ಆರೋಪಿ ಕೇದಾರಿಯನ್ನು ಬಂಧಿಸಲಾಗಿದೆ ಎಂದು ಎಸ್ಪಿ ಪ್ರಕಾಶ ನಿಕ್ಕಂ ಹೇಳಿದ್ದಾರೆ.
ಆರೋಪಿಯಿಂದ 6 ಲಕ್ಷ ಮೌಲ್ಯದ ಬಂಗಾರ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸರ ತಂಡವನ್ನು ಶ್ಲಾಘಿಸಿ ಸೂಕ್ತ ಬಹುಮಾನ ನೀಡುವುದಾಗಿ ಎಸ್ಪಿ ಪ್ರಕಾಶ ನಿಕ್ಕಂ ಘೋಷಿಸಿದ್ದಾರೆ.