ವಿಜಯಪುರ: ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲು ಹೊರಟಿದೆ. ಶಾಲೆ ಮತ್ತು ಉನ್ನತ ಶಿಕ್ಷಣ ಕ್ಷೇತ್ರಗಳಲ್ಲಿ ದೊಡ್ಡ ಪ್ರಮಾಣದ ಪರಿವರ್ತನೆಯ ಸುಧಾರಣೆಗಳಿಗೆ ಇದು ದಾರಿ ಮಾಡಿಕೊಟ್ಟಿದೆ ಎನ್ನುವುದು ಹೆಚ್ಚಿನ ಶಿಕ್ಷಣ ತಜ್ಞರ ಅಭಿಪ್ರಾಯ.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ವಿಜಯಪುರ ಶಿಕ್ಷಣ ತಜ್ಞರಿಂದ ಮೆಚ್ಚುಗೆ ನೂತನ ಶಿಕ್ಷಣ ನೀತಿಯಿಂದ ವಿದ್ಯಾರ್ಥಿಗಳು ತಮ್ಮ ಹವ್ಯಾಸಕ್ಕೆ ತಕ್ಕಂತೆ ವಿಷಯಗಳನ್ನು ಆಯ್ದುಕೊಂಡು ವಿದ್ಯಾಭ್ಯಾಸ ಪಡೆಯಬಹುದಾಗಿದೆ. ಇದರ ಜೊತೆಗೆ ಪಠ್ಯಪುಸ್ತಕಗಳನ್ನು ಸಹ ವಿದ್ಯಾರ್ಥಿಗಳಿಗೆ ಹೊರೆಯಾಗದಂತೆ ರೂಪಿಸಲಾಗುತ್ತಿದೆ. ಒಟ್ಟಾರೆ ವಿದ್ಯಾರ್ಥಿಗಳಿಗೆ ಉತ್ತಮ ವೇದಿಕೆ ಕಲ್ಪಿಸಲಿದೆ ಎಂದು ಶಿಕ್ಷಣ ತಜ್ಞರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರದ ನೂತನ ಶಿಕ್ಷಣ ನೀತಿಯು 2022ರಲ್ಲಿ ದೇಶದಲ್ಲಿ ಏಕಕಾಲದಲ್ಲಿ ಜಾರಿಯಾಗಲಿದೆ. ಇದಕ್ಕಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳು ಕೂಡ ತಯಾರಿ ನಡೆಸುತ್ತಿವೆ. ಪಠ್ಯಕ್ರಮ ಬದಲಾವಣೆ, ಪರೀಕ್ಷಾ ಪದ್ಧತಿಗಳ ಬದಲಾವಣೆ, ವಿದ್ಯಾರ್ಥಿಗಳಿಗೆ ವಿಷಯ ಆಯ್ಕೆಯಲ್ಲಿ ಸ್ವಾತಂತ್ರ್ಯ ಇರುವ ಕಾರಣ ವಿದ್ಯಾರ್ಥಿಗಳಲ್ಲಿಯೂ ನೂತನ ಶಿಕ್ಷಣ ನೀತಿ ಜಾರಿ ಕುರಿತು ಉತ್ಸುಕತೆ ಇದೆ. ವಿದ್ಯಾರ್ಥಿಗಳ ಜೊತೆಗೆ ಶಿಕ್ಷಕರಿಗೂ ಈ ನೀತಿ ಉಪಯುಕ್ತವಾಗಲಿದೆ ಎನ್ನುತ್ತಾರೆ ಇಲ್ಲಿನ ಶಿಕ್ಷಕರು.
ಈ ಸುದ್ದಿಯನ್ನೂ ಓದಿ:ಶಿಕ್ಷಣ ನೀತಿಯಲ್ಲಿ ಅಮೂಲಾಗ್ರ ಬದಲಾವಣೆ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೇಗಿದೆ ಪ್ರಕ್ರಿಯೆ?
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೊಸ ಶಿಕ್ಷಣ ನೀತಿ ಜಾರಿಗೆ ತರಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿವೆ. ಸರ್ಕಾರಿ, ಖಾಸಗಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರ ಜೊತೆ ಹಲವು ಬಾರಿ ಚರ್ಚೆಗಳು ನಡೆದಿವೆ. ಕೇಂದ್ರದ ನೂತನ ಶಿಕ್ಷಣ ನೀತಿಯ ಸಾಧಕ-ಬಾಧಕಗಳ ಬಗ್ಗೆ ಇನ್ನೊಮ್ಮೆ ಸಮಗ್ರವಾಗಿ ಚರ್ಚೆ ನಡೆಸಬೇಕಾಗಿದೆ. ರಾಜ್ಯದ ಮಟ್ಟಿಗೆ ಕೆಲವು ಸಣ್ಣಪುಟ್ಟ ಬದಲಾವಣೆಯ ಅವಶ್ಯವಿದ್ದರೆ, ಶಿಕ್ಷಣ ತಜ್ಞರ ಜೊತೆ ಸಮಾಲೋಚನೆ ನಡೆಸಿ ಅಂತಿಮ ಹಂತಕ್ಕೆ ನೂತನ ಶಿಕ್ಷಣ ನೀತಿಯನ್ನು ತಂದು ಅದನ್ನು ಜಾರಿಗೆ ತರುವ ಕೆಲಸ ಸರ್ಕಾರ ಮಾಡಬೇಕಾಗಿದೆ.