ವಿಜಯಪುರ:ಆಸ್ತಿಗಾಗಿ ದಾಯಾದಿಗಳ ಮಧ್ಯೆ ಕಲಹ ಉಂಟಾಗಿ ಓರ್ವನ ಕೊಲೆಯಲ್ಲಿ ಅಂತ್ಯವಾದ ಘಟನೆ ಬಬಲೇಶ್ವರ ತಾಲೂಕಿನ ಕಾಖಂಡಕಿಯಲ್ಲಿ ನಡೆದಿದೆ.
63 ವರ್ಷದ ವಿಠ್ಠಲ್ ಹೊಸಮನಿ ಕೊಲೆಯಾದ ವೃದ್ಧ. ದಾಯಾದಿಗಳೇ ಕಬ್ಬು ಕಡಿಯುವ ಆಯುಧದಿಂದ ಕೊಚ್ಚಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ವಿಠ್ಠಲ್ ಸಹೋದರರಾದ ಪ್ರದೀಪ ಹೊಸಮನಿ, ನೀಲಪ್ಪ ಹೊಸಮನಿ ಹಾಗೂ ಸಿದ್ದಪ್ಪ ಹೊಸಮನಿ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.
ಘಟನೆಯ ವಿವರ:ಕೊಲೆಯಾದ ವಿಠ್ಠಲ ಹೊಸಮನಿ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ಇವರ ಸಹೋದರರಾದ ಆರೋಪಿ ಸಿದ್ದಪ್ಪ ಹೊಸಮನಿ ನಿರುದ್ಯೋಗಿಯಾಗಿದ್ದ. ಯಲ್ಲಪ್ಪ ಹಾಗೂ ಸಂಗಪ್ಪ ಉದ್ಯೋಗದಲ್ಲಿದ್ದ ಕಾರಣ ತಂದೆಯ 6 ಎಕರೆ ಜಮೀನನ್ನು ನಿರುದ್ಯೋಗಿಯಾದ ಸಿದ್ದಪ್ಪನಿಗೆ ಬಿಟ್ಟು ಕೊಟ್ಟಿದ್ದರು. ಆದರೆ ಅದರಲ್ಲಿ ಪಾಲು ಕೊಡಬೇಕು ಎಂದು ವಿಠ್ಠಲ ಹೊಸಮನಿ ಪದೇ ಪದೇ ಗಲಾಟೆ ನಡೆಸುತ್ತಿದ್ದ ಎಂಬುದು ಆರೋಪ.
ಆಸ್ತಿಯಲ್ಲಿ ಪಾಲು ಕೊಡದಿದ್ದರೆ ನ್ಯಾಯಾಲಯದ ಮೆಟ್ಟಿಲೇರುವುದಾಗಿ ವಿಠ್ಠಲ್ ತನ್ನ ಸಹೋದರ ಸಿದ್ದಪ್ಪನಿಗೆ ಬೆದರಿಕೆ ಹಾಕಿದ್ದಾನಂತೆ. ಇದರಿಂದ ಕೋಪಗೊಂಡ ಆರೋಪಿಗಳು ವಿಠ್ಠಲ ಹೊಸಮನಿ ಕಣ್ಣಿಗೆ ಖಾರದ ಪುಡಿ ಎರಚಿ ಕಬ್ಬು ಕಡಿಯುವ ಕೊಯಿತಾದಿಂದ ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಎಂದು ಹೊಸಮನಿ ಪತ್ನಿ ಗೌರವ್ವ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.