ವಿಜಯಪುರ: ಆಸ್ಪತ್ರೆ ಖರ್ಚಿಗಾಗಿ ಅಪ್ಪ - ಮಗನ ನಡುವೆ ಜಗಳವಾಗಿದ್ದು, ಪುತ್ರನ ಮನೆ ಎದುರು ತಂದೆ ಧರಣಿ ಕುಳಿತಿರುವ ಘಟನೆ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ನಡೆದಿದೆ.
ನನ್ನ ಆಸ್ಪತ್ರೆ ಚಿಕಿತ್ಸೆಗೆ ಹಣ ನೀಡುತ್ತಿಲ್ಲ ಎಂದು ಆರೋಪಿಸಿ ಶಿಕ್ಷಕನಾಗಿರುವ ಪುತ್ರ ಭೀಮಾಶಂಕರ ಆನೂರು ವಿರುದ್ಧ ವೃದ್ಧ ತಂದೆ ಧರಣಿ ನಡೆಸುತ್ತಿದ್ದಾರೆ. ಆದರೆ, ಭೀಮಾಶಂಕರ ಮಾತ್ರ ತಂದೆಯ ಆರೋಪವನ್ನು ನಿರಾಕರಿಸಿದ್ದು, ತಂದೆ ಪಾಲನೆ - ಪೋಷಣೆಗಾಗಿ ಪ್ರತಿ ತಿಂಗಳು 4 ಸಾವಿರ ನೀಡುತ್ತಿದ್ದೇನೆ. ಸದ್ಯ ಆಸ್ಪತ್ರೆ ಖರ್ಚಿಗಾಗಿ ನ್ಯಾಯಾಲಯ ಸೂಚಿಸಿದಂತೆ ಎಲ್ಲ ಮಕ್ಕಳು ನೀಡುವ ಪಾಲನ್ನು ನೀಡುವುದಾಗಿ ವಾಗ್ದಾನ ಮಾಡಿದ್ದಾನೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ವೃದ್ಧ ಕುಪೇಂದ್ರ ಆನೂರು, ಮಗ - ಸೊಸೆ ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ. ಧರಣಿ ಕುಳಿತರೂ ಊಟ ನೀಡಿಲ್ಲ, ಅಕ್ಕ-ಪಕ್ಕದ ಮನೆಯವರು ಆಹಾರ ನೀಡುತ್ತಿದ್ದಾರೆ. ಇಳಿ ವಯಸ್ಸಿನಲ್ಲಿ ನನ್ನ ಪೋಷಣೆ ಮಾಡದೇ ನಿರ್ಲಕ್ಷ್ಯ ಮಾಡಿದ್ದಾನೆ.
ಸಾಲ ಮಾಡಿ ಮಕ್ಕಳನ್ನು ಬೆಳೆಸಿದ್ದೇನೆ. ಜೊತೆಗೆ ಭೀಮಾಶಂಕರಗೆ 40 ಗ್ರಾಂ ಚಿನ್ನ ಹಾಗೂ 50,000 ರೂ ನೀಡಿದ್ದೇನೆ. ಆತನ ಪಾಲಿನ ಜಮೀನನ್ನು ಸಹ ತೆಗೆದುಕೊಂಡಿದ್ದಾನೆ. ಈಗ ಆಸ್ಪತ್ರೆ ಖರ್ಚಿಗೆ ಹಣ ನೀಡುತ್ತಿಲ್ಲ. ನಾನು ಆತನಿಗೆ ನೀಡಿದ್ದ ಚಿನ್ನ ಹಾಗೂ ಹಣ ಮರಳಿ ಕೊಡಿಸಿ ಎಂದು ಪೊಲೀಸರಿಗೆ ದೂರು ನೀಡಿದರೂ ಪ್ರಕರಣ ದಾಖಲಿಸಿಕೊಂಡಿಲ್ಲ ಎಂದು ಆರೋಪಿಸಿದ್ದಾರೆ.