ವಿಜಯಪುರ: ಜಿಲ್ಲೆಯಲ್ಲಿ ಈಗಾಗಲೇ ಬಿಜೆಪಿ ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ. ಈ ಬೆನ್ನಲ್ಲೇ ಇದೀಗ ಮತ್ತೊಮ್ಮೆ ಪಕ್ಷದಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಶಾಸಕ ಹಾಗೂ ಕ್ಷೇತ್ರದ ಬಿಜೆಪಿ ಉಪಾಧ್ಯಕ್ಷರ ಬೆಂಬಲಿಗರ ಮಧ್ಯೆ ಮಾತಿನ ಜಟಾಪಟಿ ನಡೆದಿದೆ.
ಜಿಲ್ಲೆಯ ದೇವರಹಿಪ್ಪರಗಿ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಸೋಮನಗೌಡ ಪಾಟೀಲ್ ಸಾಸನೂರ ಎದುರಲ್ಲೇ ಶಾಸಕರ ಬೆಂಬಲಿಗರು ಹಾಗೂ ಕ್ಷೇತ್ರದ ಬಿಜೆಪಿ ಉಪಾಧ್ಯಕ್ಷರ ಬೆಂಬಲಿಗರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ನಿನ್ನೆ ಸಾಯಂಕಾಲ ಈ ಘಟನೆ ನಡೆದಿದ್ದು, ಮಾತಿನ ಭರಾಟೆಯಲ್ಲಿ ಕಾರ್ಯಕರ್ತರು ಕೈ - ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದರು.
ಶಾಸಕ ಹಾಗೂ ಉಪಾಧ್ಯಕ್ಷರ ಬೆಂಬಲಿಗರ ಮಧ್ಯೆ ವಾಗ್ವಾದ ಶಾಸಕ ಸೋಮನಗೌಡ ಸ್ಥಳೀಯ ಕಾರ್ಯಕರ್ತರನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ, ನಮ್ಮ ಕರೆಗಳನ್ನು ಸ್ವೀಕರಿಸುತ್ತಿಲ್ಲ ಎಂದು ಬಿಜೆಪಿ ಮಂಡಳ ಉಪಾಧ್ಯಕ್ಷ ಮುತ್ತುರಾಜ ಹಾಲಿಹಾಳ ಆರೋಪಿಸಿದ್ದಾರೆ.
ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಶಾಸಕರ ಬೆಂಬಲಿಗರು, ವಾಗ್ವಾದ ನಡೆಸಿದ್ದಾರೆ. ಇದರಿಂದ ಕೆಲ ಕಾಲ ಸಹನೆ ಕಳೆದುಕೊಂಡ ಶಾಸಕ ಸೋಮನಗೌಡ ಪಾಟೀಲ್ ಸಾಸನೂರ, ನಂತರ ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸಿದ್ದಾರೆ. ಸ್ಥಳದಲ್ಲಿದ್ದ ಮುಖಂಡರು ಸಹ ಶಾಸಕರು ಹಾಗೂ ಬಿಜೆಪಿ ಮಂಡಳ ಉಪಾಧ್ಯಕ್ಷರನ್ನು ಸಮಾಧಾನ ಪಡಿಸಿದ್ದಾರೆ.
ಓದಿ:ಇಂದು ದೇಶದಲ್ಲಿ ಕೊರೊನಾ ಪಾಸಿಟಿವ್ ಸಂಖ್ಯೆಯಲ್ಲಿ ಭಾರಿ ಏರಿಕೆ.. ಮಹಾಮಾರಿಗೆ 441 ಬಲಿ