ಮುದ್ದೇಬಿಹಾಳ :ಕರ್ತವ್ಯಕ್ಕೆ ಹಾಜರಾಗಿ ಬಸ್ ಚಾಲನೆ ಮಾಡುತ್ತಿದ್ದ ಕೆಎಸ್ಆರ್ಟಿಸಿ ಚಾಲಕನಿಗೆ ಹೂಮಾಲೆ ಹಾಕಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ ಘಟನೆ ಇಲ್ಲಿನ ಬಸ್ ನಿಲ್ದಾಣದಲ್ಲಿ ನಡೆದಿದೆ.
ಪ್ರತಿಭಟನಾನಿರತ ಸಾರಿಗೆ ನೌಕರರ ಕುಟುಂಬಸ್ಥರು 6ನೇ ವೇತನ ಆಯೋಗದ ಜಾರಿಗೆ ಆಗ್ರಹಿಸಿ 'ಲೋಟ ತಟ್ಟೆ ಚಳವಳಿ' ಹಮ್ಮಿಕೊಂಡಿದ್ದರು. ಮುದ್ದೇಬಿಹಾಳ ತಹಶೀಲ್ದಾರರಿಗೆ ನೌಕರರ ಕುಟುಂಬದ ಸದಸ್ಯರು ಪ್ರತಿಭಟನೆ ನಡೆಸಿ, ತಹಶೀಲ್ದಾರ್ಗೆ ಮನವಿ ಸಲ್ಲಿಸಿದರು. ಈ ವೇಳೆ ಬಸ್ ನಿಲ್ದಾಣದಲ್ಲಿ ನೌಕರನೊಬ್ಬ ಕೆಲಸ ನಿರ್ವಹಿಸುವುದು ಕಣ್ಣಿಗೆ ಬಿದ್ದಿದೆ.
ಕೂಡಲೇ ಆಕ್ರೋಶಗೊಂಡ ಅವರು, ಬಸ್ನಲ್ಲಿದ್ದ ಚಾಲಕ ಬಸವರಾಜ ಮಡಿವಾಳರಿಗೆ ಹೂಮಾಲೆ ಹಾಕಿ, ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ನಾವೆಲ್ಲ ಉಪವಾಸ ಬಿದ್ದಿದ್ದೇವೆ, ನೀವು ಸೇವೆ ಮಾಡ್ತಿದ್ದೀರಾ ಎಂದು ಹರಿಹಾಯ್ದಿದ್ದಾರೆ. ಪ್ರತಿಭಟನಾನಿರತ ಮಹಿಳೆಯರ ಬೈಯ್ಗುಳಕ್ಕೆ ಚಾಲಕರು ನಿಲ್ದಾಣದಲ್ಲಿ ಬಸ್ ಬಿಟ್ಟು ವಾಪಸ್ ಆಗಿದ್ದಾರೆ. ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.