ಮುದ್ದೇಬಿಹಾಳ: ದೇಶದಲ್ಲಿ ಸಂವಿಧಾನ ವಿರೋಧಿ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿದ್ದು, ಎಲ್ಲರಿಗೂ ಸಮಾನತೆ ಕಲ್ಪಿಸಿರುವ ಡಾ.ಬಿ.ಆರ್. ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನದ ಆಶಯಗಳಿಗೆ ಅಪಚಾರ ಎಸಗಲಾಗುತ್ತಿದೆ ಎಂದು ದಲಿತ ಮುಖಂಡ ಡಿ.ಬಿ. ಮುದೂರ ಬುಧವಾರ ಕಣ್ಣೀರು ಹಾಕಿದ ಘಟನೆ ನಡೆದಿದೆ.
ಇಂಡಿ ತಾಲೂಕಿನ ಮಾರ್ಸನಳ್ಳಿಯಲ್ಲಿ ಅಂಬೇಡ್ಕರ್ ನಾಮಫಲಕಕ್ಕೆ ಅಪಮಾನಿಸಿರುವ ಘಟನೆಯನ್ನು ಖಂಡಿಸಿ, ಫೆ.11 ರಂದು ಪಟ್ಟಣದಲ್ಲಿ ವಿವಿಧ ಪ್ರಗತಿಪರ ಹಾಗೂ ದಲಿತಪರ ಸಂಘಟನೆಗಳ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ತಮಟೆ ಚಳವಳಿ ಕುರಿತಾಗಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಈ ಘಟನೆ ನಡೆಯಿತು. ಸಂವಿಧಾನ ಕೇವಲ ದಲಿತರಿಗಷ್ಟೇ ಅಂಬೇಡ್ಕರ್ ಬರೆದಿದ್ದಲ್ಲ. ಎಲ್ಲರಿಗೂ ಅನ್ವಯವಾಗುವಂತೆ ಬರೆದು ಶೋಷಿತರನ್ನು ಮೇಲೆತ್ತಿದ್ದಾರೆ. ದೇಶದಲ್ಲಿ ಸಂವಿಧಾನಕ್ಕೆ ಧಕ್ಕೆ ಬಂದರೆ ರಕ್ತಚೆಲ್ಲಿಯಾದರೂ, ಜೀವ ಕೊಟ್ಟಾದರೂ ಸರಿ ಹೋರಾಟ ಮಾಡಿ ಸಂವಿಧಾನ ಉಳಿಸಿಕೊಳ್ಳುತ್ತೇವೆ ಎಂದು ದಲಿತ ಮುಖಂಡ ಮುದೂರ ಭಾವುಕರಾದರು.