ವಿಜಯಪುರ:ವಿಜಯಪುರ ಲೋಕಸಭಾ ಕ್ಷೇತ್ರ ಮೊದಲಿನಿಂದಲೂ ರಾಜಕೀಯ ಜಿದ್ದಾಜಿದ್ದಿಗೆ ಹೆಸರುವಾಸಿ, ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರಿಸಿತ್ತು. ಕಳೆದ ಎರಡು ಬಾರಿ ಗೆದ್ದು ಇದೀಗ ಮೂರನೇ ಬಾರಿಗೆ ಹ್ಯಾಟ್ರಿಕ್ ಬಾರಿಸಲು ಹೊರಟಿರುವ ಬಿಜೆಪಿ ಸಂಸದ ರಮೇಶ್ ಜಿಗಜಿಣಗಿ ವಿರುದ್ಧ ಮಹಿಳೆ ಅಖಾಡಕ್ಕಿಳಿದಿರುವುದು ಕುತೂಹಲ ಮೂಡಿಸಿದೆ.
ಮೈತ್ರಿ ಸರ್ಕಾರದ ಪ್ರಭಾವದಿಂದ ಜಿಲ್ಲಾ ರಾಜಕಾರಣದಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ. ವಿಜಯಪುರದಲ್ಲಿ ವಿಜಯ ಸಾಧಿಸಲು ಮುಂದಾಗಿರುವ ಮೈತ್ರಿ ಸರ್ಕಾರ 40 ವರ್ಷದ ರಾಜಕೀಯ ಅನುಭವಿರುವ ಜಿಗಜಿಣಗಿಯ ಎದುರು ಸುನಿತಾ ಚವ್ಹಾಣ್ ಅವರನ್ನು ಕಣಕ್ಕಿಳಿಸಿದೆ.
ಮೈತ್ರಿ ಅಭ್ಯರ್ಥಿ ಸುನಿತಾ ಚವ್ಹಾಣ ಮೂರು ಬಾರಿ ಶಾಸಕ ಹಾಗೂ ಐದು ಬಾರಿ ಸಂಸದರಾದರೂ ರಮೇಶ್ ಜಿಗಜಿಣಗಿ ಯಾವುದೇ ಅಭಿವೃದ್ಧಿ ಮಾಡಿಲ್ಲವೆಂದು ಜನರು ತಿರುಗಿಬಿದ್ದಿದ್ದಾರೆ. ಜಿಲ್ಲೆಯಲ್ಲಿ ಬಿಜೆಪಿ ವಿರೋಧದ ಅಲೆಯಿದ್ದು, ದೋಸ್ತಿ ಸರ್ಕಾರದ ಶ್ರಮದಿಂದ ಜಿಗಜಿಣಗಿ ಅವರನ್ನು ಸದೆಬಡಿಯಲು ರೆಡಿಯಾಗಿದ್ದೇವೆ. ನನ್ನ ಪತಿ ದೇವಾನಂದ ಚವ್ಹಾಣ್ ಸಹ ಜೆಡಿಎಸ್ ನಾಗಠಾಣ ಕ್ಷೇತ್ರದ ಶಾಸಕರಾಗಿದ್ದಾರೆ. ನಮಗೂ ಸಹ ರಾಜಕೀಯ ಅನುಭವ ಇರುವುದರಿಂದ ಈ ಬಾರಿ ಗೆಲುವು ತನ್ನದೇ ಎಂದು ಮೈತ್ರಿ ಸರ್ಕಾರದ ಅಭ್ಯರ್ಥಿ ಸುನಿತಾ ಚವ್ಹಾಣ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಆದರೆ ರಮೇಶ್ ಜಿಗಜಿಣಗಿ ಅವರ ರಾಜಕೀಯದ ಅನುಭವದ ಮುಂದೆ ಇವರದ್ದೇನು ಆಟ ನಡಿಯೋದಿಲ್ಲ ಎನ್ನುತ್ತಾರೆ ರಾಜಕೀಯ ಪಂಡಿತರು. ನರೇಂದ್ರ ಮೋದಿ ಅವರು ಮಾಡಿದ ಅಭಿವೃದ್ಧಿ ಮಂತ್ರವೇ ನನ್ನನ್ನು ಮತ್ತೊಮ್ಮೆ ಸಂಸದದನ್ನಾಗಿಸುತ್ತದೆ ಎನ್ನುವ ಭರವಸೆ ಜಿಗಜಿಣಗಿಯದ್ದಾಗಿದೆ. ಇಬ್ಬರೂ ಅಭ್ಯರ್ಥಿಗಳು ಏಪ್ರಿಲ್ 2 ರಂದು ಒಂದೇ ದಿನ ನಾಮಪತ್ರ ಸಲ್ಲಿಸಲು ಸಿದ್ದತೆ ಮಾಡಿಕೊಂಡಿದ್ದಾರೆ. ಅಂತಿಮವಾಗಿ ಜನ ಯಾರಿಗೆ ಮಣೆ ಹಾಕ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ.