ವಿಜಯಪುರ:ಜಿಲ್ಲೆಯಲ್ಲಿ ಇದುವರೆಗೂ 420 ಜನರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಈಗ 32 ಜನ ಮಾತ್ರ ಹೋಂ ಕ್ವಾರಂಟೈನ್ನಲ್ಲಿದ್ದಾರೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಹೇಳಿದರು.
ಈ ಬಗ್ಗೆ ಮಾಹಿತಿ ನೀಡಿ, ಇದುವರೆಗೆ 61 ಸ್ಯಾಂಪಲ್ ಕಳುಹಿಸಲಾಗಿದೆ. ಅದರಲ್ಲಿ 59 ವರದಿ ನೆಗೆಟವ್ ಬಂದಿವೆ. 2 ಜನರ ವರದಿ ಬರಲು ಬಾಕಿ ಮಾತ್ರ ಇವೆ. ಅವರು ಸ್ಥಳೀಯ ವ್ಯಕ್ತಿಗಳೇ. ಹಾಗಾಗಿ ಭಯ ಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಸಾಮರಸ್ಯ ದಕ್ಕೆಯುಂಟು ಮಾಡುವವರ ಬಗ್ಗೆ ಪ್ರತಿಕ್ರಿಯಿಸಿ, ಸಾಮಾಜಿಕ ಜಾಲತಾಣದಲ್ಲಿ ಹಾಗೂ ನೇರವಾಗಿಯೂ ಕೋಮು ಸೌಹಾರ್ಧ ಕದಡುವ ಕೆಲಸ ಯಾರೂ ಮಾಡಬಾರದು. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಎಲ್ಲರೂ ಸೇರಿ ಕೊರೊನಾ ವಿರುದ್ಧ ಹೋರಾಡಿ, ಗೆಲ್ಲೋಣ ಎಂದರು.
ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತರಕಾರಿ ಖರೀದಿಸುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಎಷ್ಟೇ ಹೇಳಿದರು ಜನ ಕೇಳುತ್ತಿಲ್ಲ. ಪೊಲೀಸರು ಇರುವಾಗ ಮಾತ್ರ ಸರಿಯಾಗಿ ನಡೆದುಕೊಳ್ಳುವ ವ್ಯಾಪಾರಿ ಹಾಗೂ ಗ್ರಾಹಕರು ಮತ್ತೆ ಎಂದಿನಂತೆ ಗುಂಪು ಸೇರುತ್ತಿದ್ದಾರೆ. ಎಪಿಎಂಸಿಯಲ್ಲಿ ಪೊಲೀಸ್ ಬ್ಯಾರಿಕೇಡ್ ಹಾಕಿ ತರಕಾರಿ ಖರೀದಿ, ಮಾರಾಟಕ್ಕೆ ಅವಕಾಶ ಮಾಡಲು ಚಿಂತನೆ ನಡೆಸಲಾಗುತ್ತಿದೆ ಎಂದರು.