ವಿಜಯಪುರ: ಎಐಎಂಐಎಂ ಪಾರ್ಟಿಯ ಇಬ್ಬರು ಮಹಾನಗರ ಪಾಲಿಕೆ ಸದಸ್ಯರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ ಎಂದು ಎಐಎಂಐಎಂ ರಾಜ್ಯಾಧ್ಯಕ್ಷ ಲತೀಫ್ ಖಾನ್ ಪಠಾಣ ಹೇಳಿದ್ದಾರೆ. ನಗರದಲ್ಲಿಂದು ಈ ವಿಚಾರವಾಗಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ವಿಜಯಪುರದ ವಾರ್ಡ್ ನಂ. 25ರ ಸದಸ್ಯೆ ಸುಫಿಯಾ ವಾಟಿ ಹಾಗೂ ವಾರ್ಡ್ ನಂ. 28ರ ಸದಸ್ಯೆ ರಿಜ್ವಾನಾ ಕೈಸರ್ ಹುಸೇನ್ ಇನಾಮದಾರ್ ಅವರನ್ನು ಪಕ್ಷದ ನಿಯಮ ಉಲ್ಲಂಘನೆ ಮಾಡಿರುವುದಕ್ಕೆ ಎಐಎಂಐಎಂ ಪಕ್ಷದಿಂದ ಉಚ್ಛಾಟಿಸಲಾಗಿದೆ ಎಂದು ತಿಳಿಸಿದರು.
ಇನ್ನು ಕಳೆದ ಅಕ್ಟೋಬರ್ 11 ರಂದು ಬೃಹತ್ ಮತ್ತು ಮಾಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಅವರ ಬೆಂಗಳೂರಿನ ನಿವಾಸದಲ್ಲಿ 7 ಜನ ಪಾಲಿಕೆ ಸದಸ್ಯರು ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಗೊಂಡಿರುವುದರ ಕುರಿತು ಸ್ವತಃ ಎಂ ಬಿ ಪಾಟೀಲ್ ಅವರೇ ಅವರ ಅಧಿಕೃತ ಜಾಲತಾಣಗಳಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದರು. ಅವರು ಹಂಚಿಕೊಂಡಿದ್ದ ಫೋಟೊಗಳಲ್ಲಿ ನಮ್ಮ ಪಕ್ಷದಿಂದ ಆಯ್ಕೆಯಾದ ಸುಫಿಯಾ ವಾಟಿ ಹಾಗೂ ರಿಜ್ವಾನಾ ಇನಾಮದಾರ್ ಇದ್ದರು. ಈ ಕುರಿತು ನಮ್ಮ ಪಕ್ಷದ ಮುಖಂಡರು ಮೌಖಿಕವಾಗಿ ಅವರಿಗೆ ಮಾತನಾಡಿದಾಗ ತಾವು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುತ್ತಿರುವುದಾಗಿ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ ಎಂದರು.
ಈ ಇಬ್ಬರು ಸದಸ್ಯರು ನಮ್ಮ ಪಕ್ಷಕ್ಕೆ ಮಾತ್ರವಲ್ಲ, ಅವರಿಗೆ ಮತ ನೀಡಿದ ಜನತೆಗೂ ಮೋಸ ಮಾಡಿದ್ದಾರೆ. ಹೀಗಾಗಿ ರಾಷ್ಟ್ರೀಯ ಅಧ್ಯಕ್ಷ ಅಸದುದ್ದಿನ್ ಓವೈಸಿ ಅವರ ಆದೇಶದ ಮೇರೆಗೆ ಈ ಇಬ್ಬರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ ಎಂದರು.