ವಿಜಯಪುರ: ಲಾಕ್‌ಡೌನ್ ಎಫೆಕ್ಟ್‌ನಿಂದ ನೆಲಕಚ್ಚಿದ ಒಣ ದ್ರಾಕ್ಷಿಗೆ ಬೆಲೆ ಹೆಚ್ಚಿಸುವಂತೆ ಕೋರಿ ಕೃಷಿ ಕಾರ್ಮಿಕರ ಸಂಘಟನೆ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯ್ತು.
ಒಣ ದ್ರಾಕ್ಷಿ ಬೆಲೆ ಹೆಚ್ಚಿಸುವಂತೆ ಆಗ್ರಹಿಸಿ ಕೃಷಿ ಕಾರ್ಮಿಕರ ಸಂಘಟನೆಯಿಂದ ಪ್ರತಿಭಟನೆ - Vijayapura District Collectors Office
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೃಷಿ ಕಾರ್ಮಿಕರ ಸಂಘಟನೆ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯ್ತು.
ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ರೈತರು, ಕೊರೊನಾ ಲಾಕ್‌ಡೌನ್ ಹಿನ್ನೆಲೆ ದ್ರಾಕ್ಷಿ ಬೆಳೆಗಾರರು ನಷ್ಟದ ಹಾದಿಯಲ್ಲಿದ್ದಾರೆ. ಲಾಕ್‌ಡೌನ್ ಸಡಿಲಿಕೆ ಬಳಿಕ ಅಂದರೆ ಕಳೆದ ಎರಡು ವಾರಗಳಿಂದ ಒಣ ದ್ರಾಕ್ಷಿ ಆನ್‌ಲೈನ್ ಮಾರುಕಟ್ಟೆ ಮರು ಆರಂಭಿಸಲಾಗಿದೆ. ಅನೇಕ ರೈತರು ಒಣ ದ್ರಾಕ್ಷಿ ಮಾರಾಟಕ್ಕೆ ಬಂದರೂ ಕೆಜಿ ಒಣ ದ್ರಾಕ್ಷಿಗೆ 150 ರೂಪಾಯಿ ಬೆಲೆಯೂ ಸಿಗದಿರೋದು ರೈತರ ಆತಂಕಕ್ಕೆ ಕಾರಣವಾಗಿದೆ.
ಸಣ್ಣ ರೈತರ ಪಾಡಂತೂ ಹೇಳತೀರದ್ದಾಗಿದೆ. ಅವರು ಕೃಷಿಗಾಗಿ ಮಾಡಿರುವ ಖರ್ಚನ್ನೂ ಭರಿಸಲಾಗದ ಸ್ಥಿಯಲ್ಲಿದ್ದಾರೆ. ಈ ವರ್ಷ ಜಿಲ್ಲೆಯಲ್ಲಿ 1.20 ಲಕ್ಷ ಮೆಟ್ರಿಕ್ ಟನ್ ಒಣ ದ್ರಾಕ್ಷಿ ಉತ್ಪಾದನೆಯಾಗಿದೆ. ಪ್ರತಿ ವರ್ಷವೂ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದ್ದ ಒಣ ದ್ರಾಕ್ಷಿ ಬೆಲೆಯಲ್ಲಿ ಸದ್ಯ ಇಳಿಕೆಯಾಗಿದ್ದು, ರೈತರನ್ನು ಸಾಲದ ಸುಳಿಗೆ ಸಿಲುಕಿಸುತ್ತಿದೆ ಎಂದು ಪ್ರತಿಭಟನಾಕಾರು ಆಕ್ರೋಶ ಹೊರ ಹಾಕಿದರು. ದ್ರಾಕ್ಷಿ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ಹಾಗೆಯೇ ಹೆಚ್ಚುವರಿಯಾಗಿ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಕೃಷಿ ಕಾರ್ಮಿಕ ಸಂಘಟನೆಯ ಕಾರ್ಯಕರ್ತರು ಮನವಿ ಸಲ್ಲಿಸಿದರು.