ವಿಜಯಪುರ: ಪ್ರವಾಸೋಧ್ಯಮ ಅಭಿವೃದ್ಧಿಗಾಗಿ ವಿಜಯಪುರ ನಗರದ ಬುರಣಾಪುರ-ಮದಬಾವಿ ಬಳಿಯ 725 ಎಕರೆ ಪ್ರದೇಶದಲ್ಲಿ ನಿರ್ಮಿಸಲು ಉದ್ದೇಶಿಸಿರುವ ವಿಮಾನ ನಿಲ್ದಾಣ ಕಾಮಗಾರಿಗೆ ಮತ್ತೆ ವಿಘ್ನ ಎದುರಾಗಿದೆ.
ವಿಜಯಪುರದ ವಿಮಾನ ನಿಲ್ದಾಣ ಕಾಮಗಾರಿಗೆ ಮತ್ತೆ ವಿಘ್ನ ಸರ್ಕಾರದ ಯೋಜನೆಯಂತೆ ಮೊದಲ ಹಂತದ ಕಾಮಗಾರಿಗೆ ಕರೆದಿದ್ದ ಟೆಂಡರ್ ಅವಧಿ ಸೆಪ್ಟೆಂಬರ್ 29ರಂದು ಪೂರ್ಣಗೊಳ್ಳಬೇಕಾಗಿತ್ತು. ಆದರೆ ತಾಂತ್ರಿಕ ಸವಾಲುಗಳು ಎದುರಾದ ಹಿನ್ನೆಲೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣ ಕಾಮಗಾರಿ ಮತ್ತಷ್ಟು ವಿಳಂಬವಾಗಲಿದೆ. ಈಗ ಮತ್ತೊಮ್ಮೆ ಲೋಕೋಪಯೋಗಿ ಇಲಾಖೆ ಅಲ್ಪಾವಧಿಯ ಟೆಂಡರ್ ಅವಧಿಯನ್ನು ವಿಸ್ತರಿಸಿ ನವೆಂಬರ್ 2ರೊಳಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲು ಕಾಲಾವಕಾಶ ನೀಡಿದೆ. ಇದು ಕಾಮಗಾರಿ ಆರಂಭಕ್ಕೆ ಮತ್ತೆ ಅಡ್ಡಗಾಲು ಹಾಕಿದಂತಾಗಿದೆ.
ಕಲಬುರಗಿ, ಶಿವಮೊಗ್ಗ ಜತೆ ವಿಜಯಪುರ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಸ್ಥಾಪಿಸಲು ರಾಜ್ಯ ಸರ್ಕಾರ 2009ರಲ್ಲಿ ಆದೇಶ ನೀಡಿತ್ತು. ಅದರಂತೆ ಕಲಬುರಗಿ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಂಡು ಈಗಾಗಲೇ ಲಘು ವಿಮಾನ ಹಾರಾಟ ಆರಂಭಿಸಲಾಗಿದೆ. ಶಿವಮೊಗ್ಗದಲ್ಲಿ ಕೂಡ ಕಾಮಗಾರಿ ಪೂರ್ಣಗೊಂಡಿದೆ. ಆದರೆ ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ಮಾತ್ರ ಕಳೆದ 11 ವರ್ಷಗಳಿಂದ ಹಾಗೆಯೇ ನನೆಗುದಿಗೆ ಬಿದ್ದಿತ್ತು.
ವಿಜಯಪುರದ ವಿಮಾನ ನಿಲ್ದಾಣ ಕಾಮಗಾರಿಗೆ ಮತ್ತೆ ವಿಘ್ನ 725 ಎಕರೆ ಪ್ರದೇಶವನ್ನು ಸಮತಟ್ಟು ಮಾಡುವ ವಿಚಾರವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಮನ್ವಯತೆ ಕೊರತೆಯಿಂದ ಕಾಮಗಾರಿ ಆರಂಭಗೊಂಡಿರಲಿಲ್ಲ. ಈಗ ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಮತ್ತೆ ವಿಮಾನ ನಿಲ್ದಾಣ ಕಾಮಗಾರಿಗೆ ಮರು ಚಾಲನೆ ಸಿಕ್ಕಿತ್ತು. ಮೂರು ತಿಂಗಳ ಹಿಂದೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ವಿಜಯಪುರದಲ್ಲಿ ವಿಮಾನ ನಿಲ್ದಾಣ ಸ್ಥಾಪನೆಗೆ ಹಸಿರು ನಿಶಾನೆ ತೋರಲಾಗಿತ್ತು. ಅದರಂತೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತರಾತುರಿಯಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಸ್ಥಳ ವೀಕ್ಷಿಸಿ ತಕ್ಷಣ ಮೊದಲ ಹಂತದಲ್ಲಿ ಟ್ರಮಿನಲ್ ಹಾಗೂ ರನ್ ವೇ ಕಾಮಗಾರಿಗಾಗಿ ಲೋಕೋಪಯೋಗಿ ಇಲಾಖೆ ಮೂಲಕ ಟೆಂಡರ್ ಕರೆದಿದ್ದರು. ಅರ್ಜಿ ಸ್ವೀಕರಿಸಲು ಟೆಂಡರ್ ಕರೆಯಲಾಗಿತ್ತು. ತಾಂತ್ರಿಕ ಬಿಡ್, ಗುತ್ತಿಗೆ ಓಪನ್ ಸೇರಿದಂತೆ ಸೆಪ್ಟಂಬರ್ 29ರೊಳಗಾಗಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಶೀಘ್ರ ಕಾಮಗಾರಿ ಆರಂಭಿಸಲು ಸೂಚನೆ ನೀಡಿದ್ದರು. ಆದರೆ ಸದ್ಯ ತಾಂತ್ರಿಕ ಸವಾಲು ಮುಂದಿಟ್ಟುಕೊಂಡು ಟೆಂಡರ್ ಅವಧಿ ವಿಸ್ತರಿಸಲಾಗಿದೆ.
ವಿಜಯಪುರದ ವಿಮಾನ ನಿಲ್ದಾಣ ಕಾಮಗಾರಿಗೆ ಮತ್ತೆ ವಿಘ್ನ ಮೊದಲ ಹಂತದ ಕಾಮಗಾರಿಗೆ 79.59 ಕೋಟಿ ರೂ. ಟೆಂಡರ್ ಬಿಡ್ ಆಹ್ವಾನಿಸಲಾಗಿದೆ. ಟ್ರಮಿನಲ್ ಅಥವಾ ರನ್ ವೇ ಮೊದಲು ಮಾಡಬೇಕು ಎನ್ನುವ ಗೊಂದಲದಲ್ಲಿದ್ದ ವಿವಿಧ ಕಂಪನಿಗಳ ಗುತ್ತಿಗೆದಾರರಿಗೆ ಸರ್ಕಾರವೇ ಕಾಲಾವಕಾಶ ನೀಡಿ ರನ್ ವೇ ಮೊದಲು ಮಾಡಲು ಅವಕಾಶ ನೀಡಿದ್ದು, ಈ ಮರು ಟೆಂಡರ್ ಅವಧಿಯನ್ನು ನವೆಂಬರ್ 2ರವರೆಗೆ ವಿಸ್ತರಿಸಿದೆ. ಟೆಂಡರ್ ಸ್ವೀಕರಿಸಲು ಅಕ್ಟೋಬರ್ 27ರ ತನಕ ಅವಕಾಶ ನೀಡಿದ್ದರೆ, ಟೆಂಡರ್ ಓಪನ್ ಮಾಡಲು ನವೆಂಬರ್ 2ರಂದು ನಿಗದಿಪಡಿಸಲಾಗಿದೆ. ಇದು ಸುಸೂತ್ರವಾಗಿ ನಡೆದರೆ ಇನ್ನೆರಡು ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಮೊದಲ ಹಂತದ ಕಾಮಗಾರಿಯ ರನ್ ವೇ ಕಾರ್ಯಕ್ಕೆ ಚಾಲನೆ ದೊರೆಯಲಿದೆ.
ನಿರೀಕ್ಷಿತ ಮಟ್ಟದಲ್ಲಿ ದೊಡ್ಡ ಕಂಪನಿಗಳು ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸದಿದ್ದರೆ ಮತ್ತೊಮ್ಮೆ ಟೆಂಡರ್ ಅವಧಿ ವಿಸ್ತರಿಸುವ ಸಾಧ್ಯತೆಗಳು ಸಹ ಇವೆ. ಇನ್ನೇನು ವಿಮಾನ ನಿಲ್ದಾಣದ ಕಾಮಗಾರಿ ಆರಂಭಗೊಂಡು ಶೀಘ್ರ ವಿಜಯಪುರದಲ್ಲಿ ಲೋಹದ ಹಕ್ಕಿಗಳು ಹಾರಾಡಲಿವೆ ಎನ್ನುವ ಕನಸು ಹೊತ್ತಿದ್ದ ಜನ ಇನ್ನಷ್ಟು ತಿಂಗಳು ಕಾಯಬೇಕಾಗಿದೆ.