ವಿಜಯಪುರ: ಜಿಲ್ಲೆಯ ಲಾಲ್ ಬಹದ್ದೂರ್ ಶಾಸ್ತ್ರಿ(ಆಲಮಟ್ಡಿ) ಜಲಾಶಯ ಎತ್ತರಿಸುವುದು ಅವಶ್ಯವಾಗಿದೆ. ಅದು ಪೂರ್ಣಗೊಳ್ಳುವ ಮೊದಲು ಜಿಲ್ಲೆಯ ಕೆರೆಗಳನ್ನು ತುಂಬಿಸಿದ ಮಾದರಿಯಲ್ಲಿ ಹಳ್ಳಗಳನ್ನು ಸಹ ಭರ್ತಿ ಮಾಡಲು ನೀರಾವರಿ ಸಚಿವರ ಜತೆ ಚರ್ಚಿಸುತ್ತೇನೆ ಎಂದು ಮಾಜಿ ಸಚಿವ ಎಂ ಬಿ ಪಾಟೀಲ್ ಹೇಳಿದರು.
ಮಾಜಿ ಜಲಸಂಪನ್ಮೂಲ ಸಚಿವ ಎಂ ಬಿ ಪಾಟೀಲ್ ಜಿಲ್ಲೆಯ ಅತಿ ದೊಡ್ಡ ಕೆರೆ ಎಂದು ಗುರುತಿಸಿಕೊಂಡ ಮಖಣಾಪುರ ಕೆರೆ ಭರ್ತಿಯಾದ ಹಿನ್ನೆಲೆ ಕೆರೆಗೆ ಬಾಗಿನ ಅರ್ಪಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆಲಮಟ್ಟಿ ಜಲಾಶಯ ಎತ್ತರಿಸುವ ಮೂಲಕ ಜಲಾಶಯದಲ್ಲಿ 100 ಟಿಎಂಸಿ ನೀರು ಹೆಚ್ಚುವರಿ ಸಂಗ್ರಹಿಸಿ, ಅದಕ್ಕೆ ತಕ್ಕಂತೆ 130 ಟಿಎಂಸಿ ನೀರನ್ನು ಜಿಲ್ಲೆಯ ಕೃಷಿ ಬಳಕೆ, ಕುಡಿಯಲು ಬಳಸಬಹುದು ಎಂದರು.
ಜಲಾಶಯ ಎತ್ತರಿಸುವವರೆಗೆ ಜಿಲ್ಲೆಯ ಕೆರೆಗೆ ನೀರು ಬಿಡಲು ಸಾಧ್ಯವಿಲ್ಲವೇ ಎನ್ನುವ ಸಾರ್ವಜನಿಕರ ಪ್ರಶ್ನೆಗೆ ನಾನು ಉತ್ತರ ನೀಡಿದ್ದೇನೆ. ತುಬಚಿ, ಮುಳವಾಡ, ಗುತ್ತಿಬಸವಣ್ಣ ಸೇರಿ ವಿವಿಧ ಯೋಜನೆಗಳ ಮೂಲಕ ಜಿಲ್ಲೆಯ ಬಹುತೇಕ ಎಲ್ಲಾ ಕೆರೆಗೆ ನೀರು ತುಂಬಿಸಲಾಗಿದೆ ಎಂದರು.
ಮಮದಾಪುರ ಸುತ್ತಮುತ್ತಲಿನ ಕೆರೆಗಳನ್ನು ಇನ್ನು ತುಂಬಿಸಬೇಕಾಗಿದೆ. ಇದರ ಜತೆ 200 ಹಳ್ಳಗಳನ್ನು ತುಂಬಿಸುವ ಯೋಜನೆ ಸಿದ್ಧಪಡಿಸಲಾಗಿದೆ. ವಿವಿಧೆಡೆ ಚೆಕ್ ಡ್ಯಾಂ ನಿರ್ಮಿಸಿ, ಎಲ್ಲಾ ಹಳ್ಳಗಳನ್ನು ತುಂಬಿಸಲು 59 ಕೋಟಿ ರೂ. ವೆಚ್ಚದ ಯೋಜನೆಯ ಪ್ರಸ್ತಾಪವನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈ ಸಂಬಂಧ ನೀರಾವರಿ ಸಚಿವರ ಜತೆ ಹಲವು ಬಾರಿ ಚರ್ಚೆ ನಡೆಸಲಾಗಿದೆ ಎಂದರು.
ಕೆರೆ, ಹಳ್ಳಗಳನ್ನು ತುಂಬಿಸಿದರೆ ಜಿಲ್ಲೆ ಸಂಪೂರ್ಣ ನೀರಾವರಿಯಾಗಲಿದೆ. ಆಲಮಟ್ಟಿ ಜಲಾಶಯ ಎತ್ತರಕ್ಕೆ ಇನ್ನೂ ಹೆಚ್ಚಿನ ಕಾಲಾವಕಾಶ ತೆಗೆದುಕೊಳ್ಳಬಹುದು. ಇದೊಂದು ದೂರದೃಷ್ಟಿಯ ಯೋಜನೆಯಾಗಿದೆ ಎಂದರು.