ವಿಜಯಪುರ: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಕುರಿತು ಜಿಲ್ಲೆಯ ಪೊಲೀಸ್ ಅಧಿಕಾರಿಗಳ ಜತೆ ಎಡಿಜಿಪಿ ಅಲೋಕ್ ಕುಮಾರ ಮಹತ್ವದ ಸಭೆ ನಡೆಸಿದರು. ಮಧ್ಯಾಹ್ನ ಗುಲಬುರ್ಗಾ ಮೂಲಕ ಜಿಲ್ಲೆಯ ಭೀಮಾತೀರದ ಚಡಚಣ ಪಟ್ಟಣಕ್ಕೆ ಆಗಮಿಸಿದ ಅವರು, ಹೊಸ ಪ್ರವಾಸ ಮಂದಿರದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದರು. ಸಭೆಯಲ್ಲಿ ಮುಖ್ಯವಾಗಿ ಮುಂಬರುವ ಚುನಾವಣೆಯಲ್ಲಿ ಅಪರಾಧ ಚಟುವಟಿಕೆ, ಹಣ ಹಂಚಲು ತಡೆಯಲು ಕೈಗೊಳ್ಳ ಬೇಕಾದ ಕ್ರಮಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಸಿದರು. ಮುಖ್ಯವಾಗಿ ಭೀಮಾತೀರದಲ್ಲಿ ಸದ್ಯ ರೌಡಿ ಶೀಟರ್ಗಳ ಪಟ್ಟಿ ಹಾಗೂ ಗಡಿಪಾರಾದ ಆರೋಪಿಗಳು ಇತ್ತೀಚಿಗೆ ನಡೆಸಿದ ಚಟುವಟಿಕೆಗಳ ಕುರಿತು ಮಾಹಿತಿ ಸಂಗ್ರಹಿಸಿದರು.
ಚಲನವಲನಗಳ ಮೇಲೆ ನಿಗಾ ವಹಿಸುವಂತೆ ಸೂಚನೆ:ಅವರ ಚಲನವಲನಗಳ ಮೇಲೆ ನಿಗಾ ವಹಿಸಿ ಮೊದಲೇ ಅವರನ್ನು ಠಾಣೆಗೆ ಕರೆಯಿಸಿ ಎಚ್ಚರಿಕೆ ನೀಡಬೇಕು ಎಂದು ಎಡಿಜಿಪಿ ಅಲೋಕ್ ಕುಮಾರ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಖಡಕ್ ಸಂದೇಶ ರವಾನಿಸಿದರು ಎಂದು ತಿಳಿದು ಬಂದಿದೆ. ಸಭೆಯಲ್ಲಿ ಬೆಳಗಾವಿ ಉತ್ತರ ವಲಯ ಐಜಿಪಿ ಸತೀಶ ಕುಮಾರ, ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದಕುಮಾರ, ಹೆಚ್ಚುವರಿ ಎಸ್ಪಿ ಸೇರಿದಂತೆ ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಯಲ್ಲಿ ಪಿಎಸ್ಐ, ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದಕುಮಾರ ಮಾತನಾಡಿ, ಇಲ್ಲಿಗೆ ಪ್ರಭಾರಿಯಾಗಿ ನೇಮಕವಾದಾಗಲೇ ಎಡಿಜಿಪಿ ಅಲೋಕ್ ಕುಮಾರ್ ಅವರು ಭೀಮಾತೀರ ಎಂಬ ಅಪಕೀರ್ತಿಯನ್ನು ಅಳಿಸಿಹಾಕಬೇಕು. ಜಗಜ್ಯೋತಿ ಬಸವಣ್ಣ ಅವರು ಹುಟ್ಟಿದ ಈ ಭೂಮಿಯ ಭೀಮಾ ತೀರದ ಹಂತಕರು ಎಂದು ಸಂಭೋದಿಸುವುದನ್ನು ತೆಗೆದುಹಾಕುವಂತೆ ಮಾಡಬೇಕು ಎಂದು ಆದೇಶ ನೀಡಿದ್ದರು. ಅದಕ್ಕಾಗಿ ಅವರೇ ಸ್ವತಃ ಇಲ್ಲಿಗೆ ಬಂದು ಸಭೆಗಳನ್ನು ಮಾಡಿದ್ದರು. ಮೂರನೇ ಬಾರಿಗೆ ಬಂದು ಈ ಬಗ್ಗೆ ಚುನಾವಣೆಗೂ ಮುನ್ನ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಸಭೆ ಮಾಡಿದ್ದಾರೆ ಎಂದು ತಿಳಿಸಿದರು.