ವಿಜಯಪುರ: ಆಲಮಟ್ಟಿ ಡ್ಯಾಂ ಎತ್ತರವನ್ನು 524.256 ಮೀಟರ್ಗೆ ಹೆಚ್ಚಿಸುವಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳ ಬಳಿ ಎಲ್ಲಾ ಮಾಹಿತಿ ಪಡೆಯುತ್ತೇನೆಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.
ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಜಿಲ್ಲೆಯ ಆಲಮಟ್ಟಿಯ ಕೃಷ್ಣಾ ಭಾಗ್ಯ ಜಲನಿಗಮ ಮಂಡಳಿ ಕಚೇರಿಯಲ್ಲಿ ಅಧಿಕಾರಿಗಳ ಸಭೆಗೆ ಮುನ್ನಾ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೊರೊನಾ ಹಾವಳಿ ಮುಗಿದ ಬಳಿಕ ಆಲಮಟ್ಟಿ ಡ್ಯಾಂ ಎತ್ತರಿಸುವ ಕುರಿತು ಕ್ರಮ ಕೈಗೊಳ್ಳಲಾಗುವುದು. ಡ್ಯಾಂ ಎತ್ತರಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬದ್ಧವಾಗಿವೆ ಎಂದರು.
ಸಿಎಂ ಬಿಎಸ್ವೈ ನೀರಾವರಿ ವಿಚಾರಕ್ಕೆ ಬೆಂಬಲಿಸುತ್ತಾರೆ. ಅಗತ್ಯ ಹಣವೂ ಸಿಗಲಿದೆ ಎಂದ ಅವರು, ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತಕ್ಕೆ ಕೇಂದ್ರ ಹಾಗೂ ರಾಜ್ಯ ಹಣ ನೀಡಲಿದ್ದು, ಯಾವುದೇ ಯೋಜನೆಗೆ ತಡೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಏತ ನೀರಾವರಿ 3ನೇ ಹಂತದ ಕಾಲುವೆಗೆ ಗಂಗಾ ಪೂಜೆ ಸಲ್ಲಿಕೆ ಹಾಗೂ ವಯಾಡೆಕ್ಟ್ ಉದ್ಘಾಟನೆ ವಿಚಾರವಾಗಿ ಶಾಸಕ ಎಂಬಿಪಿ ವಿರುದ್ಧ ಶಾಸಕ ಯಶವಂತರಾಯಗೌಡ ಅಸಮಾಧಾನ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ನಾಳೆ ಸಂಜೆ ಈ ವಿಚಾರಕ್ಕೆ ಫುಲ್ ಸ್ಟಾಪ್ ನೀಡಲಾಗುತ್ತದೆ. ಶಾಸಕ ಎಂ.ಬಿ.ಪಾಟೀಲ್ ಇಂತಹ ಸಂದರ್ಭದಲ್ಲಿ ಉದ್ಘಾಟನೆ ಮಾಡುವ ಅವಶ್ಯಕತೆ ಇರಲಿಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ. ಈ ವಿಚಾರವಾಗಿ ಮತ್ತೆ ಏನನ್ನೂ ಹೇಳಲ್ಲ ಎಂದರು.
ನೀರಾವರಿ ಸಚಿವನಾದ ಮೇಲೆ ಆಲಮಟ್ಟಿಗೆ ಮೊದಲು ಭೇಟಿ ನೀಡಿದ್ದು, ಇಲ್ಲಿನ ಯೋಜನೆಗಳನ್ನು ಹಂತ ಹಂತವಾಗಿ ಪೂರ್ಣಗೊಳಿಸಲಾಗುವುದು. ಕೃಷ್ಣಾ ಭಾಗ್ಯ ಜಲ ನಿಗಮದ ಯೋಜನೆಗಳ ಬಗ್ಗೆ ಕೇಂದ್ರ ಜಲ ಸಂಪನ್ಮೂಲ ಸಚಿವರ ಗಮನಕ್ಕೆ ತಂದಿದ್ದೇನೆ. ಅವರಿಗೆ ಯೋಜನೆಗಳ ಬಗ್ಗೆ ಮನವಿ ನೀಡಿದ್ದೇನೆ. ನೀರಾವರಿ ಯೋಜನೆಗಳು ರಾಷ್ಟ್ರೀಕರಣ ಆದರೆ ಒಳ್ಳೆಯದು. ಹಣದ ಕೊರತೆ ಆಗುವುದಿಲ್ಲ. ಕೇಂದ್ರ ಸರ್ಕಾರ ನಮ್ಮ ಪರವಿದೆ. ಈ ಭಾಗದ ನೀರಾವರಿಗೆ ಹೆಚ್ಚು ಒತ್ತು ನೀಡಲಾಗುತ್ತದೆ ಎಂದು ರಮೇಶ್ ಜಾರಕಿಹೋಳಿ ಹೇಳಿದರು.