ಮುದ್ದೇಬಿಹಾಳ: ಬೆಂಬಲ ಬೆಲೆ ಆಧಾರದ ಮೇಲೆ ತಾಲೂಕಿನ ರಕ್ಕಸಗಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದಲ್ಲಿ ತೊಗರಿ ತುಂಬುವ ಕೆಲಸ ಮಾಡಿರುವ ತಮಗೆ ಸಂಘದ ಅಧಿಕಾರಿ ಕೂಲಿ ನೀಡದೇ ಸತಾಯಿಸುತ್ತಿದ್ದು ಅವರ ಮೇಲೆ ಕ್ರಮ ಜರುಗಿಸಿ ಕೂಲಿ ಪಾವತಿಸುವಂತೆ ಸಂಘದ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸಿರುವ ಹಮಾಲರು ತಹಶೀಲ್ದಾರ್‌ರಿಗೆ ಗುರುವಾರ ಮನವಿ ಪತ್ರ ಸಲ್ಲಿಸಿದರು.
ಪಟ್ಟಣದ ತಹಶೀಲ್ದಾರ್ ಕಛೇರಿಗೆ ಆಗಮಿಸಿದ ಹಮಾಲರು, ಕೃಷಿ ಉತ್ಪನ್ನ ಮಾರುಕಟ್ಟೆಯ ಅಧಿಕೃತ ಹಮಾಲರಾಗಿರುವ ನಮ್ಮನ್ನು ರಕ್ಕಸಗಿ ಪಿಕೆಪಿಎಸ್‌ನಲ್ಲಿ ತೊಗರಿ ತುಂಬಲು ಹಮಾಲಿಗಳೆಂದು ಕೂಲಿ ಮಾಡಲು ಪ್ರತಿ ಕ್ವಿಂಟಾಲ್‌ಗೆ 50 ರೂ. ಕೊಡುವುದಾಗಿ ಹೇಳಿ ಕೆಲಸ ಮಾಡಿಸಿಕೊಂಡಿದ್ದಾರೆ. ಏಳು ಜನ ಕೂಲಿಕಾರರದ್ದು ಒಟ್ಟು 1.60 ಲಕ್ಷ ರೂ. ಪಾವತಿಸಬೇಕಿತ್ತು. ಆದರೆ ಕೂಲಿ ಮಾಡಿ ನಾಲ್ಕು ತಿಂಗಳು ಗತಿಸಿದರೂ ಕೂಲಿ ಕೊಡದೇ ಸತಾಯಿಸುತ್ತಿದ್ದಾರೆ. ಕೂಲಿ ನಂಬಿಯೇ ಬದುಕು ಸಾಗಿಸುವ ನಮಗೆ ಬೇರೆ ಗತಿಯಿಲ್ಲದೇ ಉಪವಾಸ, ವನವಾಸದಿಂದ ಬಳಲುವಂತಾಗಿದೆ ಎಂದು ಆರೋಪಿಸಿದರು.