ವಿಜಯಪುರ:ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಕಳೆದ ಜ.4ರಂದು ನಡೆದ ಯುವಕನೊಬ್ಬನ ಕೊಲೆ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ. ಯುವಕನನ್ನು ಪ್ರೇಯಸಿಯ ಸಹೋದರನೇ ಕೊಲೆ ಮಾಡಿರುವುದು ಪೊಲೀಸ್ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಇಂಡಿ ಪಟ್ಟಣದಲ್ಲಿ ನಿತೇಶ ಮಾಶ್ಯಾಳಕರ (26) ಎಂಬ ಯುವಕನ ಕೊಲೆಯಾಗಿತ್ತು. ನಿತೀಶ ಹಾಗೂ ಯುವತಿಯೊಬ್ಬಳು ಕಳೆದ 8 ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಒಟ್ಟಿಗೆ ಪದವಿ ಓದುವಾಗಿನಿಂದಲೇ ಇಬ್ಬರೂ ಪ್ರೀತಿಸುತ್ತಿದ್ದರು. ಆದರೆ, ಈ ನಡುವೆ ಯುವತಿಯನ್ನು ಮಹಾರಾಷ್ಟ್ರದ ಯುವಕನೊಬ್ಬನೊಂದಿಗೆ ಮದುವೆ ಮಾಡಿ ಕೊಡಲಾಗಿತ್ತು.
ಮದುವೆಯಾದ ಬಳಿಕ ನಿತೇಶ ಮದ್ಯ ಸೇವಿಸಿ ಯುವತಿಗೆ ಕರೆ ಮಾಡುತ್ತಿದ್ದ. ಇದರಿಂದ ಮದುವೆಯಾದ ಕೆಲ ದಿನಗಳಲ್ಲೇ ಯುವತಿಯು ಪತಿಯನ್ನು ಬಿಟ್ಟು ಆತನ ಜೊತೆ ಬಂದಿದ್ದಳು. ಇಬ್ಬರೂ ಹೊಸ ಜೀವನಕ್ಕೆ ಆರಂಭಿಸಿದ್ದರು. ಆದರೆ, ಇದ್ದಕ್ಕಿದ್ದಂತೆ ಜನವರಿ 4ರಂದು ಯುವಕನ ಕೊಲೆಯಾಗಿತ್ತು. ಕೊಲೆ ಮಾಡಿದವರು ಯಾರು ಎಂಬ ಬಗ್ಗೆ ಖಾಕಿಗೆ ಸವಾಲು ಎದುರಾಗಿತ್ತು.