ವಿಜಯಪುರ:ಹಣ ಕದ್ದ ಆರೋಪ ಎದುರಿಸುತ್ತಿದ್ದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯಪುರ ನಗರದಲ್ಲಿ ಬೆಳಕಿಗೆ ಬಂದಿದೆ. ಸೋಮನಾಥ ನಾಗಮೋತಿ (25) ಎಂಬಾತನೇ ಮೃತ ಯುವಕ.
ಎಪಿಎಂಸಿ ಪೊಲೀಸ್ ಠಾಣೆಯ ಪಿಎಸ್ಐ ಸೋಮೇಶ ಗೆಜ್ಜಿ ಅವರ ಸಹೋದರ ಸಚಿನ್ ಗೆಜ್ಜಿ ಕಾರಿನಲ್ಲಿದ್ದ ಒಂದು ಲಕ್ಷ ರೂಪಾಯಿ ಹಣ ಕದ್ದ ಆರೋಪವನ್ನು ಸೋಮನಾಥ ಎದುರಿಸುತ್ತಿದ್ದ. ಈ ಸಂಬಂಧ ಠಾಣೆಗೆ ಪಿಎಸ್ಐ ಸೋಮೇಶ್ ಕರೆಯಿಸಿ ಹಲ್ಲೆ ಮಾಡಿ ಹಣ ವಾಪಸ್ ನೀಡುವಂತೆ ಹಿಂಸೆ ಕೊಡುತ್ತಿದ್ದಾರೆ.
ಇದರಿಂದ ಮನನೊಂದು ಆತ್ಮಹತ್ಯೆ ಮಾಡಿ ಕೊಳ್ಳುತ್ತಿರುವುದಾಗಿ ಸೋಮನಾಥ ಎಂದು ಫೇಸ್ಬುಕ್ ಲೈವ್ನಲ್ಲಿ ಕೆಲ ದಿನಗಳ ಹಿಂದೆ ಹೇಳಿಕೊಂಡಿದ್ದ. ಇದೀಗ ಸೋಮನಾಥ ಕೊಲ್ಹಾರ ಬಳಿಯ ಕೃಷ್ಣಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆತನ ಶವ ಪತ್ತೆಯಾಗಿದೆ.
ಈ ಘಟನೆ ಕುರಿತು ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಪ್ರತಿಕ್ರಿಯಿಸಿದ್ದು, ಪೊಲೀಸ್ ಇಲಾಖೆ ತನಿಖೆ ಮಾಡುತ್ತದೆ. ಆಧಿಕಾರಿಗಳು ನಿಷ್ಪಕ್ಷಪಾತವಾಗಿ ತನಿಖೆ ಮಾಡುತ್ತಾರೆ. ತನಿಖೆ ಆಗಲಾರದೇ ನಾವು ಏನು ಹೇಳಲು ಆಗಲ್ಲ. ತನಿಖೆ ನಂತರ ತಪ್ಪಿತಸ್ಥರಿಗೆ ಶಿಕ್ಷೆ ಆಗಲಿದೆ ಎಂದು ಹೇಳಿದರು.
ಇದನ್ನೂ ಓದಿ:ಬೆಂಗಳೂರಲ್ಲಿ ಹೆಚ್ಚಿದ ಪುಂಡರ ಹಾವಳಿ.. ಹಾಡಹಗಲೇ 'ಗನ್' ಹಿಡಿದು ಬೈಕ್ ರೈಡಿಂಗ್!