ಮುದ್ದೇಬಿಹಾಳ :ಯಾರಾದರೂ ಹಾವು ಕಚ್ಚಿಸಿಕೊಂಡರೆ ಮೊದಲು ಜೀವ ಉಳಿಸಿಕೊಳ್ಳುವುದಕ್ಕೆ ಆಸ್ಪತ್ರೆಗೆ ಧಾವಿಸುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಯುವಕ ತನ್ನನ್ನು ಕಚ್ಚಿದ ಹಾವು ಹಿಡಿದು ಡಬ್ಬದಲ್ಲಿ ಹಾಕಿಕೊಂಡು ಬಂದು ಚಿಕಿತ್ಸೆ ಪಡೆದುಕೊಂಡಿರುವ ಅಪರೂಪದ ಘಟನೆ ಶುಕ್ರವಾರ ಸಂಜೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಈ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.
ತಾಲೂಕಿನ ತಂಗಡಗಿ ಗ್ರಾಮದ ಯುವಕ ಭಾಷಾ ಎಂಬುವವರು ಹಾವುಗಳನ್ನು ಹಿಡಿಯುವ ಮೂಲಕ ಈ ಭಾಗದಲ್ಲಿ ಹೆಸರು ಮಾಡಿಕೊಂಡಿದ್ದಾರೆ. ಆದರೆ ಬಸವನ ಬಾಗೇವಾಡಿ ತಾಲೂಕಿನ ಕಣಕಾಲ ಗ್ರಾಮದಲ್ಲಿ ಹಾವು ಹಿಡಿಯಲೆಂದು ತೆರಳಿದ್ದ ವೇಳೆ ವಿಷಕಾರಿ ನಾಗರಹಾವು ಅವರ ಕೈಗೆ ಕಚ್ಚಿದೆ. ಆದರೂ ಪಟ್ಟು ಬಿಡದೆ ಆ ನಾಗರಹಾವನ್ನು ಹಿಡಿದು ಡಬ್ಬದಲ್ಲಿ ಹಾಕಿಕೊಂಡು ಮುದ್ದೇಬಿಹಾಳ ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಸದ್ಯ ಸ್ನೇಕ್ ಭಾಷಾ ಅವರಿಗೆ ಜೀವಕ್ಕೆ ತೊಂದರೆಯಿಲ್ಲ: ಹಾವು ಕಚ್ಚಿಸಿಕೊಂಡು ನಿತ್ರಾಣರಾಗಿದ್ದ ಭಾಷಾ ಅವರಿಗೆ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ ಅಮರನಾಥ ಕುಂಬಾರ, ಶುಶ್ರೂಷಕ ಅಧಿಕಾರಿ ಎಂ ಬಿ ಬಾಗವಾನ್ ತೀವ್ರ ನಿಗಾ ಘಟಕದಲ್ಲಿ ಇಟ್ಟು ಚಿಕಿತ್ಸೆ ನೀಡಿದ್ದಾರೆ. ಸದ್ಯಕ್ಕೆ ಭಾಷಾ ಚೇತರಿಸಿಕೊಂಡಿದ್ದು, ಅವರ ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
500 ನೂರಕ್ಕೂ ಹೆಚ್ಚು ಹಾವುಗಳನ್ನು ರಕ್ಷಿಸಿದ ಭಾಷಾ: ಚಿಕಿತ್ಸೆ ಪಡೆದುಕೊಂಡು ಹಾವು ಬಿಡುವಂತೆ ಅಕ್ಕಪಕ್ಕದವರು, ವೈದ್ಯರು ಹೇಳಿದರೂ ಹಾವು ಬಿಡದ ಭಾಷಾ, ಅದಕ್ಕೆ ಆಗಿರುವ ಗಾಯಕ್ಕೆ ಚಿಕಿತ್ಸೆ ಕೊಟ್ಟು ಬಳಿಕ ಅರಣ್ಯ ಇಲಾಖೆಯವರೆಗೆ ಒಪ್ಪಿಸುವುದಾಗಿ ತಿಳಿಸಿ ಉರಗ ಪ್ರೇಮ ಮೆರೆದಿದ್ದಾರೆ. ಈವರೆಗೂ 500ಕ್ಕೂ ಹೆಚ್ಚು ಹಾವುಗಳನ್ನು ಹಿಡಿದು ಸುರಕ್ಷಿತವಾದ ಸ್ಥಳಕ್ಕೆ ಸ್ನೇಕ್ ಭಾಷಾ ಬಿಟ್ಟಿದ್ದಾರೆ.