ವಿಜಯಪುರ:ಯುವತಿಯೋರ್ವಳು ತನ್ನ ತಂದೆಯ ಕನಸು ಈಡೇರಿಸಲು ಶ್ರಮಪಡುತ್ತಿದ್ದಳು. ಅದರಂತೆ ಓದಿನಲ್ಲೂ ಜಾಣೆಯಾಗಿದ್ದ ಈಕೆ ಇಂದು ನಡೆಯಬೇಕಿದ್ದ ಎಂ.ಕಾಂ ಅಂತಿಮ ಪರೀಕ್ಷೆಯಲ್ಲಿ ಭಾಗಿಯಾಗಬೇಕಿತ್ತು. ಶಿಕ್ಷಣ ಮುಗಿಸಿ ಪಿಎಚ್ಡಿ ಮಾಡಬೇಕೆಂದು ಆಕೆ ಕನಸ ಹೊತ್ತಿದ್ದಳು. ಅದಕ್ಕಾಗಿ ತಂದೆಯೂ ಸಾಲ ಮಾಡಿ ವಿದ್ಯಾಭ್ಯಾಸ ಕೊಡಿಸಲು ಮುಂದಾಗಿದ್ದರು. ಆದರೆ ತಂದೆ-ಮಗಳ ಕನಸು ಈಡೇರಲಿಲ್ಲ. ಕಾರಣ ನಿನ್ನೆ ಗುಮ್ಮಟ ನಗರಿಯ ಹೊರವಲಯದಲ್ಲಿರುವ ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ಆಕೆಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಕಲಬುರಗಿ ಮೂಲದ ಐಶ್ವರ್ಯ ನಾಟೇಕರ್(24) ಮೃತ ಯುವತಿ. ಕಡುಬಡತನವಿದ್ದರೂ ಸಹ ಅವೆಲ್ಲವನ್ನೂ ಸವಾಲಾಗಿ ಸ್ವೀಕರಿಸಿ ಸ್ನಾತಕೋತ್ತರ ವಿದ್ಯಾಭ್ಯಾಸ ಮಾಡುತ್ತಿದ್ದ ಈಕೆ ಓದಿನಲ್ಲಿ ಮುಂದಿದ್ದಳು. ಎಂಕಾಂ ಮುಗಿಸಿ ಮುಂದೆ ಪಿಹೆಚ್ಡಿ ಮಾಡುತ್ತೇನೆ ಎಂದು ತಂದೆ ಬಳಿ ಹೇಳಿದ್ಳು. ಇದಕ್ಕೆ ಪೂರಕವಾಗಿ ತಂದೆಯೂ ಮಗಳ ವಿದ್ಯಾಭ್ಯಾಸಕ್ಕೆ ಸಮಸ್ಯೆಯಾಗಬಾರದು ಎಂದು ಸಾಲ ಮಾಡಿ ಶಿಕ್ಷಣ ಕೊಡಿಸಲು ಮುಂದಾಗಿದ್ದರು. ಆದರೆ ಐಶ್ವರ್ಯ ನಿನ್ನೆ ಶವವಾಗಿ ಪತ್ತೆಯಾಗಿದ್ದಾಳೆ.
ಇನ್ನು ಮೃತ ಐಶ್ವರ್ಯ ತಂದೆ ಹೋಟೆಲ್‌ನಲ್ಲಿ ಕೆಲಸ ಮಾಡಿ ಮಗಳನ್ನ ಓದಿಸುತ್ತಿದ್ದರು. ಮಗಳು ವಿದ್ಯಾವಂತಳಾದ್ರೆ ನಮಗೂ ಆಸರೆಯಾಗ್ತಾಳೆ ಎಂಬ ಕನಸು ಹೊತ್ತಿದ್ರು. ಅಷ್ಟೇ ಅಲ್ಲದೆ ಮಗಳು ಮನೆಗೆ ಬಂದ ಬಳಿಕ ಸಂಬಂಧಿಕರ ಹುಡುಗನ ಜೊತೆಗೆ ನಿಶ್ಚಿತಾರ್ಥ ಮಾಡುವ ಯೋಚನೆಯಲ್ಲಿದ್ದರು. ಆದರೆ ಐಶ್ವರ್ಯ ನಿನ್ನೆ ಬೆಳಗ್ಗೆ ಉಪಹಾರ ಸೇವಿಸಿದ ಬಳಿಕ ಡಿಪ್ರೆಶನ್ಗೆ ಒಳಗಾಗಿ ಕೊಠಡಿಯಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆದರೆ ಈಕೆಯ ಸಾವು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.