ವಿಜಯಪುರ: ನಟ ಪುನೀತ್ ಸಮಾಧಿಗೆ ನಿತ್ಯ ಸಾವಿರಾರು ಅಭಿಮಾನಿಗಳು ಭೇಟಿ ನೀಡಿ ದರ್ಶನ ಪಡೆಯುತ್ತಿದ್ದಾರೆ. ಅದೇ ರೀತಿ ಜಿಲ್ಲೆಯ ಧರೆಪ್ಪ ಅರ್ಧಾವೂರ ಎಂಬ ಅಭಿಮಾನಿ ತಮ್ಮ ಕುಟುಂಬ ಸಮೇತವಾಗಿ ಪಾದಯಾತ್ರೆ ಜೊತೆಗೆ ಜನರಲ್ಲಿ ಜಾಗೃತಿ ಮೂಡಿಸುತ್ತಾ ವಿಶೇಷವಾದ ರೀತಿಯಲ್ಲಿ ಅವರ ಸಮಾಧಿಗೆ ಭೇಟಿ ನೀಡಲು ಮುಂದಾಗಿದ್ದಾನೆ.
ಯಾರಾರು? ಎಷ್ಟು ಜನರಿದ್ದಾರೆ?:ವಿಜಯಪುರ ಜಿಲ್ಲೆಯಿಂದ ಬೆಂಗಳೂರಿಗೆ ಒಟ್ಟು 535 ಕಿ.ಮೀ ಪಾದಯಾತ್ರೆ ಮಾಡುತ್ತಾ ತೆರಳುತ್ತಿರುವುದು ಈ ಅಭಿಮಾನಿಯ ವಿಶೇಷವಾಗಿದೆ. ಧರೆಪ್ಪ ಪತ್ನಿ ವಿದ್ಯಾರಾಣಿ, ಇವರ ಮಕ್ಕಳಾದ ಸೋನಾಲಿ, ಸಮರ್ಥ, ಸೌಜನ್ಯ, ಶ್ರಾವಣಿಮ, ಸಿದ್ದಾರ್ಥ ಹಾಗೂ ಧರೆಪ್ಪನ ಕಿರಿಯ ಸಹೋದರನ ಇಬ್ಬರು ಮಕ್ಕಳಾದ ಲಕ್ಷ್ಮೀಕಾಂತ, ಲಕ್ಷ್ಮೀವಿನಾಯಕ, ಬಾವ ಶಶಿಕುಮಾರ ಮತ್ತು ಆತನ ಸ್ನೇಹಿತ ಆಕಾಶ ಕಾರಿಕೋಳ. ಇವರೆಲ್ಲರೂ ವಿಜಯಪುರದಿಂದ ಕಳೆದ ಮೂರು ದಿನಗಳಿಂದ ಪಾದಯಾತ್ರೆಯನ್ನು ಬೆಳೆಸಿದ್ದಾರೆ.
ಗಮನ ಸೆಳೆದ ಜನಜಾಗೃತಿ: ಬರೀ ಪಾದಯಾತ್ರೆಯ ಮೂಲಕ ತೆರಳವುದಷ್ಟೇ ಅಲ್ಲ, ಮಾರ್ಗದುದ್ದಕ್ಕೂ ಜನರಲ್ಲಿ ಪುನೀತ್ ರಾಜಕುಮಾರ ಆಶಯಗಳ ಬಗ್ಗೆಯೂ ಜಾಗೃತಿ ಮೂಡಿಸುತ್ತಿದ್ದಾರೆ. ಪುನೀತ್ ರಾಜಕುಮಾರ ಬಯಕೆಯಂತೆ ಕನ್ನಡ ಶಾಲೆಗಳ ಅಭಿವೃದ್ಧಿ, ಅಂಗಾಂಗ ದಾನ ಹಾಗೂ ನೇತ್ರದಾನದ ಕುರಿತು ಧರೆಪ್ಪ ಹಾಗೂ ಇಡೀ ಕುಟುಂಬ ಜಾಗೃತಿ ಮೂಡಿಸುತ್ತಿದೆ. ಅವರ ಜೊತೆಗಿರುವ ಮಾರುತಿ ವ್ಯಾನ್ಗೆ ಈ ಕುರಿತು ಸ್ಟಿಕ್ಕರ್ ಅಂಟಿಸಿ ಜನರಲ್ಲಿ ಪುನೀತ್ ಅವರ ಆಶಯಗಳ ಬಗ್ಗೆ ಜಾಗೃತಿ ಮೂಡಿಸುತ್ತ ಇವರೆಲ್ಲಾ ಬೆಂಗಳೂರಿನತ್ತ ಹೆಜ್ಜೆ ಹಾಕುತ್ತಿದ್ದಾರೆ.
ನಿಕಟ ಸಂಪರ್ಕಹೊಂದಿದ್ದ ಧರೆಪ್ಪ:ಕಳೆದ 15 ವರ್ಷಗಳಿಂದ ಪುನೀತ್ ಅಭಿಮಾನಿಯಾಗಿ ಹಾಗೂ ಪುನೀತ್ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಧರೆಪ್ಪ ಪುನೀತ್ ಅವರು ಮೃತಪಟ್ಟಾಗ ಬಹಳ ನೊಂದಿದ್ದರು. ಪುನೀತ್ ಅವರ ನೆನಪು ಹಾಗೇ ಇರಲಿ ಎಂದು ಅಂತ್ಯಕ್ರಿಯೆಯಲ್ಲೂ ಭಾಗಿಯಾಗದೇ ಹಾಗೆಯೇ ನೋವು ನುಂಗಿದ್ದರು. ನಂತರ ಪುನೀತ್ ಅವರಿಗೆ ವಿಶೇಷ ಗೌರವ ಸಲ್ಲಿಸಲು ತೀರ್ಮಾನಿಸಿದ್ದರು. ಅದರಂತೆ ಇದೀಗ ಪುನೀತ್ ಅವರ ಸಮಾಧಿವರೆಗೂ ವಿಜಯಪುರದಿಂದ ಇಡೀ ಕುಟುಂಬದೊಂದಿಗೆ ಪಾದಯಾತ್ರೆ ಬೆಳೆಸಿದ್ದಾರೆ.