ಮುದ್ದೇಬಿಹಾಳ: ಸಮರ್ಪಕವಾಗಿ ಬಿತ್ತನೆ ಬೀಜ, ಕೀಟನಾಶಕ ಹಾಗೂ ರಿಯಾಯಿತಿ ದರದಲ್ಲಿ ದೊರೆಯುವ ಕೃಷಿ ಇಲಾಖೆಯ ಸೌಲಭ್ಯಗಳನ್ನು ನೀಡದೆ ಬೇಜವಾಬ್ದಾರಿ ತೋರುತ್ತಿದ್ದಾರೆ ಎಂದು ಆರೋಪಿಸಿ ತಾಳಿಕೋಟಿ ರೈತ ಸಂಪರ್ಕ ಕೇಂದ್ರದ ಮುಂದೆ ರೈತರೊಬ್ಬರು ಅರೆಬೆತ್ತಲೆಯಾಗಿ ತಲೆ ಮೇಲೆ ಕಲ್ಲು ಹೊತ್ತು ಪ್ರತಿಭಟನೆ ನಡೆಸಿದ್ದಾರೆ.
ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳ ವಿರುದ್ಧ ಆಕ್ರೋಶ ತಾಳಿಕೋಟಿ ತಾಲೂಕಿನ ಕಲಕೇರಿ ರಾಮರಾವ್ ಕುಲಕರ್ಣಿ ಎಂಬುವರೇ ರೈತ ಸಂಪರ್ಕ ಕೇಂದ್ರದ ಎದುರಿಗೆ ತಲೆ ಮೇಲೆ ಕಲ್ಲನ್ನು ಹೊತ್ತುಕೊಂಡು ಆಕ್ರೋಶ ವ್ಯಕ್ತಪಡಿಸಿದ ರೈತ. ಸುದ್ದಿಗಾರರೊಂದಿಗೆ ಮಾತನಾಡಿದ ರೈತ ರಾಮರಾವ್ ಕುಲಕರ್ಣಿ, ಯಾವಾಗ ಕೇಳಿದರು ಅಧಿಕಾರಿಗಳು ಹಾರಿಕೆ ಉತ್ತರ ಕೊಡುತ್ತಿದ್ದಾರೆ. ಪ್ರಭಾವಿಗಳಿಗೆ ಮಣಿದು ಅವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ ಎಂದು ದೂರಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಭುಗೌಡ ಬಿರಾದಾರ ಮಾತನಾಡಿ, ರೈತರಿಗೆ ಯಾವುದೇ ರೀತಿ ತಾರತಮ್ಯ ಮಾಡಬಾರದು. 1973ರಿಂದ ಸಿಂಧಗಿ ತಾಲೂಕಿನೊಳಗೆ ಇದ್ದ ನಾವು ಇದೀಗ ತಾಳಿಕೋಟೆ ತಾಲೂಕಿಗೆ ಸೇರ್ಪಡೆಯಾಗಿದ್ದೇವೆ. ಎಲ್ಲಾ ಸೌಲಭ್ಯಗಳು ನಮ್ಮ ರೈತರಿಗೆ ಸಿಗಬೇಕು. ಸ್ಪಿಂಕ್ಲರ್, ಬಿತ್ತನೆ ಬೀಜ, ತಾಡಪತ್ರಿ, ಗೊಬ್ಬರ ಸೇರಿದಂತೆ ಎಲ್ಲಾ ವಸ್ತುಗಳು ನಮ್ಮ ರೈತರಿಗೆ ದೊರೆಯುವ ವ್ಯವಸ್ಥೆ ಆಗಬೇಕು. ಇತ್ತೀಚೆಗೆ ಜಿಪಂ ಅಧ್ಯಕ್ಷರ ಸಭೆಯಲ್ಲಿ ಕಲಕೇರಿಯಲ್ಲಿಯೂ ರೈತ ಸಂಪರ್ಕ ಕೇಂದ್ರ ತೆರೆಯಲು ಠರಾವು ಪಾಸ್ ಮಾಡಿದ್ದು, ಅದಕ್ಕೆ ಶೀಘ್ರ ಅಧಿಕಾರಿಗಳು ಕ್ರಮ ಜರುಗಿಸಬೇಕು ಎಂದರು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಅನಿಲಕುಮಾರ ಢವಳಗಿ, ಎರಡು ದಿನಗಳಲ್ಲಿ ಸಂಬಂಧಿಸಿದ ಅಧಿಕಾರಿಗಳ ಜೊತೆಗೆ ಮಾತನಾಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಬಳಿಕ ಪ್ರತಿಭಟನೆಯನ್ನು ಅಂತ್ಯಗೊಳಿಸಲಾಯಿತು.