ವಿಜಯಪುರ:ವಿವಿಧತೆಯಲ್ಲಿ ಏಕತೆ ಸಾರುವ ದೇಶ ನಮ್ಮದು. ಇಲ್ಲಿ ಸಾಕಷ್ಟು ಮಸೀದಿಗಳಿಗೆ ಹಿಂದೂಗಳು ಹೋಗಿ ಪ್ರಾರ್ಥನೆ ಸಲ್ಲಿಸುತ್ತಾರೆ. ಅದೇ ರೀತಿ ಹಿಂದೂ ದೇವಸ್ಥಾನದಲ್ಲಿ ಮುಸ್ಲಿಮರು ಬಂದು ಪೂಜೆ ಸಲ್ಲಿಸುತ್ತಾರೆ.
ಭಾವಕೈತೆಯ ಸಂದೇಶವಾಗಿ ಮುಸ್ಲಿಂ ಕಲಾವಿದನೊಬ್ಬ ಗಣೇಶನ ಪೇಟಿಂಗ್ ಮಾಡಿಕೊಂಡು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾನೆ. ವಿಜಯಪುರದ ಜೈಲ್ ದರ್ಗಾದ ನಿವಾಸಿ ಮುಸ್ತಾಕ ತಿಕೋಟಾ ಎಂಬುವವರು ಗಣೇಶನ ಪರಮ ಭಕ್ತರಾಗಿದ್ದು, ಚಿಕ್ಕಂದಿನಿಂದಲೇ ಚಿತ್ರ ಬಿಡಿಸುವ ಹವ್ಯಾಸ ಬೆಳೆಸಿಕೊಂಡಿದ್ದಾರೆ.
ಈಗ ಗಣೇಶೋತ್ಸವ ಆಚರಣೆ ವೇಳೆ ತಾವು ಬಿಡಿಸಿದ ವಿವಿಧ ರೂಪದ ಗಣೇಶನ ಚಿತ್ರಗಳ ಪ್ರದರ್ಶನ ನಡೆಸಿ, ಎಲ್ಲರಿಂದಲೂ ಸೈ ಎನಿಸಿಕೊಂಡಿದ್ದಾರೆ. ವಿಜಯಪುರ ನಗರದ ಹಲವೆಡೆ ತಮ್ಮ ಪೇಂಟಿಂಗ್ ಪ್ರದರ್ಶನ ಮಾಡಿದ್ದಾರೆ.
ಚಿಕ್ಕಂದಿನಿಂದಲೂ ಗಣೇಶನ ಚಿತ್ರ ಬಿಡಿಸುತ್ತಿರುವ ಮುಸ್ಲಿಂ ಕಲಾವಿದ ಈ ಕುರಿತು ಮಾತನಾಡಿದ ಅವರು, ಕಲೆಗೆ ಯಾವುದೇ ಧರ್ಮ, ಜಾತಿ ಅಡ್ಡ ಬರುವುದಿಲ್ಲ. ನಮ್ಮ ವಿಜಯಪುರ ಭಾವೈಕ್ಯತೆಯನ್ನು ಸಾರುವ ಭೂಮಿ. ನಾನು ಮುಸ್ಲಿಂ ಆದರೂ ಕೂಡಾ ಗಣೇಶನ ಚಿತ್ರಗಳನ್ನು ಬಿಡಿಸಿದ್ದೀನಿ ಎಂದರು.
ಸುಮಾರು ಇಪ್ಪತ್ತು ಬಗೆಯ ವಿವಿಧ ರೂಪಗಳಲ್ಲಿ ಗಣೇಶನನ್ನು ಚಿತ್ರಿಸಿದ್ದು, ಹಲವರು ನನ್ನ ಕಲೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಚಿತ್ರಕಲೆಯನ್ನು ನಾನು ಹಣಕ್ಕಾಗಿ ಮಾಡುತ್ತಿಲ್ಲ. ಇದು ನನ್ನ ಹವ್ಯಾಸವಾಗಿದ್ದು, ಇನ್ನು ಮುಂದಿನ ದಿನಗಳಲ್ಲಿ ಹೆಚ್ಚಿನ ಚಿತ್ರ ಪ್ರದರ್ಶನಗಳನ್ನು ಏರ್ಪಡಿಸುತ್ತೇನೆ ಎಂದು ಹೇಳಿದರು.